ಬಳ್ಳಾರಿ: ಜಿಲ್ಲೆಯ ಪಕ್ಷನಿಷ್ಠ ಕಾರ್ಯಕರ್ತರ ಕಷ್ಟ-ಕಾರ್ಪಣ್ಯಗಳಿಗೆ ಸಕಾಲದಲ್ಲಿ ಸ್ಪಂದಿಸಿ ಕಣ್ಣೀರೊರೆಸುವ ಕಾರ್ಯಕ್ಕೆ ಮುಂದಾಗುವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅಭಯ ನೀಡಿದ್ದಾರೆ.
ಬಿಜೆಪಿ ಅಭಿನಂದನಾ ಸಮಾರಂಭ: ಡಿಸಿಎಂ ಸವದಿ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಭಾಗಿ ಬಳ್ಳಾರಿಯ ಪಾರ್ವತಿ ನಗರದ ಬಸವ ಭವನದಲ್ಲಿಂದು ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾನು ಯಾವತ್ತೂ ಕೂಡ ಈ ಜಿಲ್ಲೆಯ ಕಾರ್ಯಕರ್ತರ ಕಷ್ಟ-ಕಾರ್ಪಣ್ಯಗಳಿಗೆ ತಣ್ಣೀರು ಎರಚುವ ಕಾರ್ಯವನ್ನು ಮಾಡೋದಿಲ್ಲ. ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಬಳಿಕ ನಿಮ್ಮೊಂದಿಗೆ ನಾನಿರುವೆ. ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆ ಎಂದರು.
ಹಂಪಿ ಉತ್ಸವ ಮಾಡೋಣ:
ಬಳ್ಳಾರಿಗೆ ಬಂದು ಕಲ್ಯಾಣ ಕರ್ನಾಟಕದ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಇಲ್ಲಿಗೆ ಬರುವಾಗ ಕೆಲವರು, ಹಂಪಿ ಉತ್ಸವ ಆಚರಣೆಯ ಕುರಿತು ಮನವಿ ಪತ್ರ ನೀಡಿದ್ದಾರೆ. ಅಧಿಕಾರಿಗಳು ಹಾಗೂ ಕಲಾಸಕ್ತರ ಸಭೆಯನ್ನು ಕರೆದು ಉತ್ಸವ ಆಚರಿಸೋಣವೆಂದು ಎಂದರು.
ಇನ್ಮುಂದೆ ಹೈ.ಕ. ಬೇಡ; ಕೆಕೆ ಅಂತ ಕರೆಯೋಣ:
ಇನ್ಮುಂದೆ ನಾವೆಲ್ಲ ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಂತ ಕರೆಯೋದು ಬೇಡ. ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಬಳಿಕ, ಇದನ್ನ ನಾವು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಂತಾನೆ ಕರೆಯೋಣ ಎಂದು ಡಿಸಿಎಂ ಸವದಿ ಹೇಳಿದ್ರು.
ಮುಂದಿನ ದಿನಗಳಲ್ಲಿ ಕೇವಲ ಪಕ್ಷದ ಸಕ್ರಿಯ ಕಾರ್ಯಕರ್ತನಿಗೆ ಮಾತ್ರ ಅಧಿಕಾರ:
ಈ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕರ್ತ ಮುಖಂಡರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಕಟೀಲ್, ಮುಂದಿನ ದಿನಗಳಲ್ಲಿ ಪ್ರತಿಭಟನೆ ವೇಳೆ ಬಸ್ಸಿಗೆ ಕಲ್ಲು ತೂರಾಡಿದ್ರೆ ಅಥವಾ ದುಂಡಾ ವರ್ತನೆ ನಡೆಸಿದ್ರೆ, ನಗರಸಭೆ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶವೂ ಸಿಗೋದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಬಿಜೆಪಿ ಪಕ್ಷದ ಸಕ್ರಿಯ ಸದಸ್ಯನಾಗಿ ಮನೆಮನೆಗೆ ಭೇಟಿ ಕೊಟ್ಟು ಮತದಾರರ ಕಷ್ಟ- ಕಾರ್ಪಣ್ಯಗಳಿಗೆ ಸದಾಕಾಲ ಸ್ಪಂದಿಸುವವನಿಗೆ ಮಾತ್ರ ಎಲ್ಲ ಅಧಿಕಾರವನ್ನು ಅನುಭವಿಸುವ ಅವಕಾಶ ಕಲ್ಪಿಸಲಾಗುವುದು. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ. ಸಾಮಾನ್ಯ ಕಾರ್ಯಕರ್ತನೂ ಕೂಡ ಈ ಪಕ್ಷದಲ್ಲಿ ಏನು ಬೇಕಾದ್ರೂ ಆಗಬಹುದು ಎಂಬುದಕ್ಕೆ ತಾಜಾ ಉದಾಹರಣೆ ನಾನು ಎಂದರು.
ಕಾಂಗ್ರೆಸ್ಸಿನಲ್ಲಿ ಕುಟುಂಬ ರಾಜಕಾರಣ ಬೇರೂರಿದೆ:
ಕಾಂಗ್ರೆಸ್ಸಿನಲ್ಲಿ ಕುಟುಂಬ ರಾಜಕಾರಣ ಬೇರೂರಿದೆ. ಅಲ್ಲಿ ಗಾಂಧಿ ಕುಟುಂಬದವರೇ ಎಐಸಿಸಿ ಅಧ್ಯಕ್ಷರಾಗಿಯೇ ಮುಂದುವರಿಯುತ್ತಾರೆ. ಆದ್ರೆ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರೂ ಕೂಡ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಎಂದು ಕಟೀಲ್ ತಿಳಿಸಿದ್ರು.
ಇಡೀ ಕರ್ನಾಟಕವೇ ಕಲ್ಯಾಣ ಆಗಬೇಕು:
ಕೇವಲ ಈ ಭಾಗಕ್ಕೆ ಮಾತ್ರ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ರೆ ಸಾಲದು. ಇಡೀ ಕರ್ನಾಟಕವೇ ಕಲ್ಯಾಣ ಆಗಬೇಕು. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಕೋರಿದ್ದಾರೆ.