ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ಬಳಿ ದಲ್ಲಾಳಿಯೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಈ ಪ್ರಕರಣದಿಂದ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.
ಮಂಜುನಾಥ್(42) ಅಲಿಯಾಸ್ ಅಕ್ಕಿ ಮಂಜು ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಂಜು ಅಕ್ಕಿ ವ್ಯಾಪಾರ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ತಡರಾತ್ರಿವರೆಗೂ ಮಂಜು ಬರುವುದನ್ನು ನೋಡುತ್ತ ಕಾದು ಕುಳಿತ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಂತಕರು ಸಿನಿಮೀಯ ಶೈಲಿಯಲ್ಲಿ ಸ್ಕೆಚ್ ಹಾಕಿ, ಕೊಚ್ಚಿ ಕೊಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಜುನಾಥ್ ಪಡಿತರ ಅಕ್ಕಿಯನ್ನು ಜನರಿಂದ ಕಡಿಮೆ ದರಕ್ಕೆ ಪಡೆದು ಸಂಗ್ರಹಿಸಿ, ಬ್ಲಾಕ್ನಲ್ಲಿ ಮಾರಾಟ ಮಾಡುತ್ತಿದ್ದ. ಅಕ್ರಮ ಅಕ್ಕಿ ಸಾಗಾಟ ಸಂಬಂಧ ಬಳ್ಳಾರಿಯ ವಿವಿಧ ಠಾಣೆಯಲ್ಲಿ ಮಂಜುನಾಥ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಇತ್ತೀಚೆಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಮಂಜುನಾಥ್ ಮಧ್ಯವರ್ತಿಯಾಗಿದ್ದ ಎಂದು ತಿಳಿದುಬಂದಿದೆ.