ಹೊಸಪೇಟೆ :ಹೊಸಪೇಟೆಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿ ನೂತನ ವಿಜಯನಗರ ಜಿಲ್ಲೆ ರಚಿಸಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ ಜಿಲ್ಲೆ ಜನಸಂಖ್ಯೆ ಹಾಗೂ ಭೌಗೋಳಿಕ ವಿಸ್ತಾರದಲ್ಲಿ ಅತಿದೊಡ್ಡ ಜಿಲ್ಲೆ. ಪರಿಣಾಮಕಾರಿ ಹಾಗೂ ಸಮರ್ಥ ಆಡಳಿತ ದೃಷ್ಟಿಯಿಂದ ಜಿಲ್ಲೆಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚಿಸುವ ಅಗತ್ಯವಿದೆ.
ಈ ಹಿಂದೆ 2007ರಲ್ಲೇ ವಿಜಯನಗರ ಜಿಲ್ಲೆ ರಚನೆಗಾಗಿ ಒತ್ತಾಯಿಸಿ ರಸ್ತೆತಡೆ ಪ್ರತಿಭಟನೆ, ಹೊಸಪೇಟೆ ಬಂದ್, ರಾಷ್ಟ್ರೀಯ ಹೆದ್ದಾರಿ ಬಂದ್, ರೈಲ್ ತಡೆ ಚಳವಳಿ ಮುಂತಾದ ಪ್ರತಿಭಟನೆಯ ಜೊತೆಗೆ ಸತತ 100 ದಿನ ಹೋರಾಟ, ಧರಣಿ ಸತ್ಯಾಗ್ರಹ ನಡೆಸಿ ಅಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ನೂತನ ಜಿಲ್ಲೆ ರಚನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.