ಬಳ್ಳಾರಿ:ರಾಜ್ಯವ್ಯಾಪಿ ಭೀಕರ ಬರ ಹಾಗೂ ನೆರೆ ಹಾವಳಿಯಂತಹ ಕರಿಛಾಯೆ ಆವರಿಸಿದ್ದು, ಅದರ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆಯೆಂದು ಬಳ್ಳಾರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಬೃಹತ್ ಪ್ರತಿಭಟನೆ ನಡೆಸಿತು.
ಬಳ್ಳಾರಿಯ ಡಿಸಿ ಕಚೇರಿಯ ಕಂಪೌಂಡ್ಗೆ ಅಂಟಿಕೊಂಡಂತೆ ತಾತ್ಕಾಲಿಕ ಶೆಡ್ ನಿರ್ಮಿಸುವ ಮೂಲಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮುಂಡ್ಲೂರು ಹನುಮ ಕಿಶೋರ, ಹಾಲಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ ಎನ್.ಸೂರ್ಯನಾರಾಯಣ ರೆಡ್ಡಿಯವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ಕೆಲಕಾಲ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು ಡಿಸಿ ನಕುಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನೆರೆ ಪರಿಹಾರ ವಿಳಂಬ: ಬಳ್ಳಾರಿಯಲ್ಲಿ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ಭೀಕರ ಮಳೆಯಿಂದಾಗಿ ರಾಜ್ಯದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದ್ದು, ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ಈ ಸರ್ಕಾರ ವಿಫಲವಾಗಿದೆ. ಚಂದ್ರಯಾನ-2 ಉಡಾವಣೆ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದರು. ಆದರೆ, ಇಸ್ರೋ ಅಧ್ಯಕ್ಷರ ಜತೆ ಮಾತನಾಡಿಕೊಂಡು ಹೊರಟರೆ ಹೊರತು, ಕನಿಷ್ಠ ಪಕ್ಷ ಕರ್ನಾಟಕದ ನೆರೆ ಪರಿಸ್ಥಿತಿ ಬಗ್ಗೆ ಚರ್ಚಿಸಬೇಕೆಂಬ ವ್ಯವಧಾನವೂ ಕೂಡ ಇಲ್ಲದಂತಾಗಿದೆಯೆಂದು ಕಿಡಿಕಾರಿದ್ದಾರೆ.
ಈ ರಾಜ್ಯದಲ್ಲಿ 25 ಮಂದಿ ಬಿಜೆಪಿ ಸಂಸದರಿದ್ದಾರೆ, ಯಾವೊಬ್ಬ ಸಚಿವರೂ ಕೂಡ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿಲ್ಲ. ಕೇಂದ್ರದ ಸಚಿವರು ಬಂದು ಭೇಟಿ ಮಾಡಿದರೂ, ಕೆಳಗಡೆ ಇಳಿಯದೇ ಸಮೀಕ್ಷೆ ಮಾಡಿದ್ದಾರೆ. ಇದನ್ನು ಹೊರತು ಪಡಿಸಿದರೆ, ರಾಜ್ಯದ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಮಾಜಿ ಶಾಸಕ ಎನ್.ಸೂರ್ಯ ನಾರಾಯಣರೆಡ್ಡಿ ದೂರಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ವೆಂಕಟೇಶ ಹೆಗಡೆ, ಮುಖಂಡರಾದ ಅಸುಂಡಿ ನಾಗರಾಜಗೌಡ, ಕಮಲಾ ಮರಿಸ್ವಾಮಿ, ಅಸೂಂಡಿ ಹೊನ್ನೂರುಸ್ವಾಮಿ, ಬಿ.ಎಂ.ಪಾಟೀಲ್, ಕೆರೆಕೋಡಪ್ಪ, ಪದ್ಮಾ ಇದ್ದರು.