ಕರ್ನಾಟಕ

karnataka

ETV Bharat / state

ಕಂಪ್ಯೂಟರ್ ತರಬೇತಿ ಪಡೆದವರಿಗೆ ಜಿಲ್ಲಾಡಳಿತದಿಂದ ಲ್ಯಾಪ್‍ಟ್ಯಾಪ್ : ಜಿಲ್ಲಾಧಿಕಾರಿ ನಕುಲ್

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಜಿಲ್ಲಾ ಖನಿಜ ನಿಧಿಯಡಿ ಕೈಗೆತ್ತಿಕೊಳ್ಳಲಾಗಿರುವ ಸಂಡೂರು ಸ್ವಯಂ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

SS Nakul
SS Nakul

By

Published : Sep 19, 2020, 6:09 PM IST

ಬಳ್ಳಾರಿ : ಜಿಲ್ಲಾ ಖನಿಜ ನಿಧಿಯಡಿ ಕೈಗೆತ್ತಿಕೊಳ್ಳಲಾಗಿರುವ ಸಂಡೂರು ಸ್ವಯಂ ಶಕ್ತಿ ಯೋಜನೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯೂ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಡಿಸಿ, ಸಂಡೂರು ಸ್ವಯಂಶಕ್ತಿ ಯೋಜನೆಯಡಿ ಸಂಡೂರು ತಾಲೂಕಿನ 26 ಹಳ್ಳಿಗಳಲ್ಲಿನ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದ್ದು, ಒಟ್ಟು 1,078 ಯುವಜನರಲ್ಲಿ ಈಗಾಗಲೇ 666 ಜನರು ತರಬೇತಿ ಪಡೆದುಕೊಂಡಿದ್ದಾರೆ. ಇನ್ನುಳಿದವರು ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪಡೆದವರಿಗೆ ಪ್ರಮಾಣಪತ್ರ, 3 ಸಾವಿರ ಗೌರವಧನ ನೀಡಲಾಗುವುದು. ಇದರ ಜೊತೆಗೆ ಅವರ ಭವಿಷ್ಯಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಗುಣಮಟ್ಟದ ಲ್ಯಾಪ್‍ಟಾಪ್ ನೀಡುವುದಾಗಿ ಹೇಳಿದರು.

ಕಂಪ್ಯೂಟರ್ ತರಬೇತಿ ಪಡೆದುಕೊಂಡ ಬಹುತೇಕ ಯುವಕ-ಯುವತಿಯರು ಕಾಮನ್ ಸರ್ವಿಸ್ ಸೆಂಟರ್(ಸಿಎಸ್‍ಸಿ)ಗಳ ಸ್ಥಾಪನೆಗೆ ಒಲವು ತೋರುತ್ತಿದ್ದಾರೆ. ಆಸಕ್ತರಿಗೆ ಜಿಲ್ಲಾಡಳಿತ ವತಿಯಿಂದಲೇ ಸಿಎಸ್‍ಸಿ ತರಬೇತಿ ಒದಗಿಸಲಾಗುವುದು. ಈ ಮೂಲಕ ಅವರ ಬದುಕಿಗೆ ಆಸರೆ ಕಲ್ಪಿಸಿಕೊಡುವುದಕ್ಕೆ ಯತ್ನಿಸಲಾಗುವುದು ಎಂದರು.

ಗಾಂಧಿ ಜಯಂತಿ ದಿನ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ:

ಸಂಡೂರು ಸ್ವಯಂ ಶಕ್ತಿ ಯೋಜನೆ ಅಡಿ ಮಹಿಳೆಯರ ಅರ್ಥಿಕ ಸಬಲೀಕರಣ ಉದ್ದೇಶದಿಂದ ಸಂಡೂರು ತಾಲೂಕಿನ ಎಲ್ಲಾ ಗ್ರಾ.ಪಂ.ಗಳಲ್ಲಿ ಅವರಿಗೆ ಹೊಲಿಗೆ ಯಂತ್ರದ ತರಬೇತಿ ನೀಡಲಾಗುತ್ತಿದೆ. ಈಗಾಗಲೇ 17 ಗ್ರಾ.ಪಂ.ಗಳಲ್ಲಿ ಹೊಲಿಗೆ ಯಂತ್ರದ ತರಬೇತಿ ಮುಕ್ತಾಯವಾಗಿದ್ದು, ಉಳಿದ 9 ಗ್ರಾ.ಪಂ.ಗಳಲ್ಲಿ ತರಬೇತಿ ನಡೆಯುತ್ತಿದೆ ಎಂದು ವಿವರಿಸಿದ ಡಿಸಿ ನಕುಲ್, ಈಗಾಗಲೇ 914 ಜನರು ತರಬೇತಿ ಪಡೆದುಕೊಂಡಿದ್ದಾರೆ. ಇನ್ನೂ 1,043 ಮಹಿಳೆಯರ ತರಬೇತಿ ನಡೆಯುತ್ತಿದೆ ಎಂದರು.

ತರಬೇತಿ ಪಡೆದುಕೊಂಡ ಎಲ್ಲಾ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಹೊಲಿಗೆಗೆ ಸಂಬಂಧಿಸಿದ ಕಚ್ಛಾವಸ್ತುವನ್ನು ಗಾಂಧಿ ಜಯಂತಿ ದಿನ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹಾಗೂ ಸ್ಥಳೀಯ ಶಾಸಕ ಈ.ತುಕಾರಾಂ ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ವಿತರಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ವಿಠ್ಠಲರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ABOUT THE AUTHOR

...view details