ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಹೆದ್ದಾರಿ 150-ಎ ಬೈಪಾಸ್ ರಸ್ತೆಗೆ ಸ್ಥಳೀಯರಿಂದ ವಿರೋಧ

ಶ್ರೀರಂಗಪಟ್ಟಣದಿಂದ ಬೀದರ್​ವರೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 150-ಎ ಬೈಪಾಸ್ ರಸ್ತೆ ನಿರ್ಮಾಣದಿಂದ ಏನೆಲ್ಲಾ ತೊಂದರೆಯಾಗಲಿದೆ? ಈ ರಸ್ತೆ ನಿರ್ಮಾಣದಿಂದ ಆಗುವ ಲಾಭ ಹಾಗೂ ಹಾನಿಗಳ ಬಗ್ಗೆ ಸ್ಥಳೀಯರು ಏನು ಹೇಳುತ್ತಾರೆ ಗೊತ್ತಾ?

ರಾಷ್ಟ್ರೀಯ ಹೆದ್ದಾರಿ 150-ಎ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ

By

Published : Jun 26, 2019, 9:56 PM IST

ಬಳ್ಳಾರಿ:ಶ್ರೀರಂಗಪಟ್ಟಣದಿಂದ ಬೀದರ್​​​ವರೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 150-ಎ ಬೈಪಾಸ್ ರಸ್ತೆ ನಿರ್ಮಾಣದಿಂದ ಅತ್ಯಾಧುನಿಕ ಶೈಕ್ಷಣಿಕ ಪರಿಕರ ಹೊಂದಿರುವ ಖಾಸಗಿ ಶಾಲೆ ಸೇರಿದಂತೆ ಅನೇಕ ಬೃಹತ್​ ಕಟ್ಟಡಗಳು‌ ನೆಲಸಮಗೊಳ್ಳುವ ಸಾಧ್ಯತೆಯಿದೆ.

ನಗರದ ಸಿರುಗುಪ್ಪ ರಸ್ತೆಯಿಂದ ಡಾ.ರಾಜ್ ರಸ್ತೆ, ತಾಳೂರು ರಸ್ತೆ, ಕಪ್ಪಗಲ್ ರಸ್ತೆ, ಸಂಗನಕಲ್ಲು ರಸ್ತೆ ಹಾಗೂ ಬಿಸಿಲಹಳ್ಳಿ ಮುಖೇನ ಹಾದು ಹೋಗುವ ಈ ರಾಷ್ಟ್ರೀಯ ಹೆದ್ದಾರಿ 150-ಎ ಬೈಪಾಸ್ ರಸ್ತೆಯಲ್ಲಿ ‌ಬರುವ ದೊಡ್ಡ ದೊಡ್ಡ ಶಾಲಾ ಕಟ್ಟಡಗಳು, ಮಠ-ಮಂದಿರಗಳು ಹಾಗೂ ಬೃಹತ್ ಕಟ್ಟಡಗಳು ನೆಲಸಮಗೊಳ್ಳುತ್ತಿದ್ದು, ನಗರ ಪ್ರದೇಶ ವ್ಯಾಪ್ತಿಯ ವಿಸ್ತಾರ ತಗ್ಗಲಿದೆ ಎಂಬ ದೂರುಗಳು ಕೇಳಿ ಬಂದಿವೆ.

ಬಹುಮುಖ್ಯವಾಗಿ ಸಂಗನಕಲ್ಲು ಗ್ರಾಮದಿಂದ ಬಳ್ಳಾರಿಯತ್ತ ಬರುವ ಮಾರ್ಗದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಸುಂದರ ಪರಿಸರವುಳ್ಳ ಶಾಲೆಯೊಂದಿದೆ. ಅದುವೇ ವಿಜಡಮ್ ಲ್ಯಾಂಡ್ ಶಾಲೆ. ಅತ್ಯಾಧುನಿಕ ಶೈಕ್ಷಣಿಕ ಪರಿಕರ ಹೊಂದಿರುವ ಈ ಶಾಲೆಯು ನಗರ ಹೊರವಲಯದ ಉತ್ತಮ ಪರಿಸರದಲ್ಲಿದೆ. ಅದರ ಸಂಪೂರ್ಣ ಶಾಲಾ ಕಟ್ಟಡವು ನೆಲಸಮಗೊಳ್ಳಲಿದೆ.

ಈಗಾಗಲೇ ಕೆಲವು ಕಡೆ ಮಾರ್ಕ್ ಮಾಡಲಾಗಿದೆ. ಅಲ್ಲದೇ, ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಖಾಸಗಿ ಹಾಗೂ ಸರ್ಕಾರಿ ಭೂಮಿ ಈಗಾಗಲೇ ನಗರದಿಂದ ಅಂದಾಜು 2 ಕಿ.ಮೀ. ವ್ಯಾಪ್ತಿಯಲ್ಲಿದೆ. ಸಿರುಗುಪ್ಪ ರಸ್ತೆಯ ಲಕ್ಷ್ಮಿನಗರ ಕ್ಯಾಂಪ್, ಬೆಂಗಳೂರು ರಸ್ತೆ, ಹಲಕುಂದಿ ಗ್ರಾಮ ನಗರದಿಂದ 8-10 ಕಿ.ಮೀ ವ್ಯಾಪ್ತಿಯಲ್ಲಿ ಈ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ.ಆದರೆ, ಸಂಗನಕಲ್ಲು ಗ್ರಾಮ‌ದ ಹೊರವಲಯದಲ್ಲಿ‌ ಮಾತ್ರ ಕೇವಲ 2 ಕಿ.ಮೀ ವ್ಯಾಪ್ತಿಯಲ್ಲಿ ಈ ಬೈಪಾಸ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಜವಾಬ್ದಾರಿ ಹೊತ್ತಿರುವವರ ನಿರ್ಧಾರ ತಪ್ಪಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಬೈಪಾಸ್ ರಸ್ತೆಯಿಂದ ದಿಗ್ಭ್ರಮೆ:

ಸತತ 10 ವರ್ಷಗಳ ಕಾಲ ಇಲ್ಲಿ ಶಾಲೆಯನ್ನು ನಡೆಸುತ್ತಿದ್ದೇವೆ. ಕಳೆದ ವರ್ಷ ಏಕಾಏಕಿ 150 -ಎ ಬೈಪಾಸ್ ರಸ್ತೆ‌ ನಿರ್ಮಾಣದ ಕುರಿತು ನೀಲನಕ್ಷೆ ತಯಾರಾಗಿದೆ. ಹೀಗಾಗಿ, ನಮಗಂತು ದಿಗ್ಭ್ರಮೆಯಾಗಿದೆ. ಈ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣದಿಂದ ಇಡೀ ಶಾಲೆಯ ಕಟ್ಟಡವೇ ನೆಲ ಸಮಗೊಳ್ಳುವ ರೀತಿಯಲ್ಲಿ ನೀಲನಕ್ಷೆ ತಯಾರಾಗಿದೆ.

ಈಗಾಗಲೇ ರಾಜ್ಯ ಹೆದ್ದಾರಿ ರಸ್ತೆಯು ಸಂಗನಕಲ್ಲು ಗ್ರಾಮ ಹೊರವಲಯದಿಂದ ಹಾದು ಹೋಗಿದೆ. ಈಗ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಬರೋದ್ರಿಂದ ಇಲ್ಲಿರುವ ಖಾಸಗಿ ಶಾಲೆ, ನಿವೇಶನ, ಕಟ್ಟಡ ಸೇರಿದಂತೆ ಇನ್ನಿತರೆ ಚಟುವಟಿಕೆಗಳು ಸ್ತಬ್ಧವಾಗಲಿವೆ. ಕೂಡಲೇ ಈ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯನ್ನು ಅಂದಾಜು 5 ಕಿ.ಮೀ ಅಂತರದಲ್ಲಿ ಈ ರಸ್ತೆಯನ್ನು ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಈಗಾಗಲೇ ನಗರ ಹಾಗೂ ಗ್ರಾಮದ ಪ್ರದೇಶ ವ್ಯಾಪ್ತಿಯು ಬಹು ವಿಸ್ತಾರವಾಗಿ ಬೆಳೆದು‌ ನಿಂತಿದೆ. ಇದರಿಂದ ನಾವು ನೆಮ್ಮದಿ ಜೀವನ ಸಾಗಿಸೋದೇ ಕಷ್ಟಸಾಧ್ಯವಾಗಿಬಿಟ್ಟಿದೆ ಎಂದು ವಿಜಡಮ್ ಲ್ಯಾಂಡ್ ಶಾಲೆಯ ಮುಖ್ಯ ಶಿಕ್ಷಕ ಕಟ್ಟೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 150-ಎ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ

ಸಂಗನಕಲ್ಲು ಗ್ರಾಮದ ವ್ಯಾಪ್ತಿ ಬೆಳೆದಿದೆ. ಖಾಸಗಿ ಶಿಕ್ಷಣ ಸಂಸ್ಥೆ ಸೇರಿದಂತೆ ಮಠ-ಮಂದಿರಗಳು ಇಲ್ಲಿ ತಲೆ ಎತ್ತಿವೆ. ಮೇಲಾಗಿ, ಖಾಸಗಿ ಶಿಕ್ಷಣ ಸಂಸ್ಥೆ ಕಟ್ಟಡವೂ ಸೇರಿದಂತೆ ಅನೇಕ ಬೃಹತ್ ಕಟ್ಟಡಗಳು ಕೂಡ ನೆಲಸಮಗೊಳ್ಳಲಿವೆ. ಕೂಡಲೇ ಸ್ವಲ್ಪದೂರ ಈ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ನಿರ್ಮಿಸಬೇಕು ಎನ್ನುತ್ತಾರೆ ರೈತ ಸಂಘದ ಮುಖಂಡ ಕೋಟೆ ದಾಸಪ್ಪ.

ಸಣ್ಣ, ಅತೀಸಣ್ಣ ರೈತರು ಸೇರಿದಂತೆ ಇತರೆ ಕೂಲಿಕಾರ್ಮಿಕ ಕುಟುಂಬದ ಭೂಮಿಯು ಈ ಬೈಪಾಸ್ ನಿರ್ಮಾಣಕ್ಕಾಗಿಯೇ ವಶಪಡಿಸಿಕೊಳ್ಳಲಾಗುತ್ತದೆ. ಅಲ್ಲದೇ, ಖಾಸಗಿ ಶಾಲೆಯ ಆಟದ ಮೈದಾನ ಸೇರಿದಂತೆ ಇಡೀ ಕಟ್ಟಡವೇ ಬೈಪಾಸ್ ರಸ್ತೆ‌ ಸುಪರ್ದಿಗೆ ಬರಲಿದೆ. ಸಿರುಗುಪ್ಪ, ಹೊಸಪೇಟೆ ಹಾಗೂ ಅನಂಪುರ ರಸ್ತೆಯಲ್ಲಿ ನಗರ ಪ್ರದೇಶದಿಂದ 10 ಕಿ. ಮೀ.ನಲ್ಲಿ ಈ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಯಾವ ದುರುದ್ದೇಶ ಇಟ್ಟುಕೊಂಡು ಈ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೀರಿ ಎಂದು ಸ್ಪಷ್ಟಪಡಿಸಬೇಕು ಎನ್ನುತ್ತಾರೆ ಯುವ ವಕೀಲ ಸಿ.ಈಶ್ವರಾವ್ ಸಂಗನಕಲ್ಲು.

ABOUT THE AUTHOR

...view details