ಬಳ್ಳಾರಿ: ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ನೆರವೇರಿಸಲು ಬೆಂಗಳೂರಿನಲ್ಲಿ 4 ಕಡೆ ವಿದ್ಯುತ್ ಚಿತಗಾರ ಒದಗಿಸಲಾಗುತ್ತಿದ್ದು, ಅದೇ ರೀತಿ ಬಳ್ಳಾರಿಯಲ್ಲಿ ವಿದ್ಯುತ್ ಚಿತಗಾರ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯ ಗುಗ್ಗರಹಟ್ಟಿ ಅಥವಾ ಅವಶ್ಯ ಇರುವ ಕಡೆ ಈ ವಿದ್ಯುತ್ ಚಿತಗಾರದ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ನೆರವೇರಿಸಲು ಅನುವು ಮಾಡಿಕೊಡಲಾಗುವುದು ಎಂದರು.
ಸೋಂಕು ಲಕ್ಷಣವಿಲ್ಲದ ರೋಗಿಗಳಿಗೆ ಹೋಮ್ ಕ್ವಾರಂಟೈನ್:ಸೋಂಕು ಲಕ್ಷಣವಿಲ್ಲದ ರೋಗಿಗಳಿಗೆ ಹೋಮ್ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಹೋಮ್ ಕ್ವಾರಂಟೈನ್ ಮಾಡುವುದಕ್ಕಿಂತ ಮುಂಚೆ ನಮ್ಮ ತಂಡವು ಆ ಲಕ್ಷಣವಿಲ್ಲದ ರೋಗಿಯ ಮನೆಗೆ ತೆರಳಿ ಪರಿಶೀಲನೆ ನಡೆಸಲಿದೆ. ಮನೆಯಲ್ಲಿ ಸಮರ್ಪಕ ಸೌಕರ್ಯ ಇದ್ದಲ್ಲಿ ಮಾತ್ರ ಹೋಮ್ ಕ್ವಾರಂಟೈನ್ಗೆ ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲದಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು ಎಂದರು.