ಬಳ್ಳಾರಿ:ಜಿಂದಾಲ್ ಉಕ್ಕು ಕಾರ್ಖಾನೆಗೆ ಕಡಿಮೆ ಬೆಲೆಗೆ ಭೂಮಿ ಮಾರಾಟ ಮತ್ತು ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯನ್ನು ಲೈನಿಂಗ್ ಹೆಸರಲ್ಲಿ ನವೀಕರಗೊಳಿಸುತ್ತಿರುವುದನ್ನು ವಿರೋಧಿಸಿ ಜೂನ್ 10ರಂದು ಹೊಸಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 13 ಬಂದ್ ಮಾಡಿ ಪ್ರತಿಭಟಿಸುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ್ ಹೇಳಿದರು.
ಲೈನಿಂಗ್ ಹೆಸರಲ್ಲಿ ನವೀಕರಣ ಆರೋಪ: ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯನ್ನು ಲೈನಿಂಗ್ ಹೆಸರಲ್ಲಿ ನವೀಕರಗೊಳಿಸುತ್ತಿರುವುದನ್ನು ವಿರೋಧಿಸಿ ಜೂನ್ 10 ರಂದು ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಬಳ್ಳಾರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರವು ಜಿಂದಾಲ್ ಕಂಪನಿಗೆ ಎಕರೆಗೆ ₹1 ಲಕ್ಷ 22 ಸಾವಿರದಂತೆ 3666 ಎಕರೆ ಮಾರಾಟಕ್ಕೆ ಮುಂದಾಗಿರುವುದು ಖಂಡನಾರ್ಹ ಎಂದರು. ಎಲ್ಎಲ್ ಸಿ ಕಾಲುವೆಯ ನವೀಕರಣ ಹೆಸರಲ್ಲಿ ಅಗಲೀಕರಣ ಮಾಡುವುದರಿಂದ ನಮ್ಮ ರಾಜ್ಯದ ರೈತರಲ್ಲೇ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದ್ರು.
ಮೈತ್ರಿ ಸರ್ಕಾರವು ದೇಶದ ಬೆನ್ನೆಲುಬಾದ ರೈತರ ಬೆನ್ನಲುಬನ್ನು ಮುರಿಯುತ್ತಿದೆ. ಬರಗಾಲದಿಂದ ಗುಳೆ ಹೋಗುವುದು ಹೆಚ್ಚಿದೆ. ಆದರೂ ಬರಗಾಲ ಪರಿಹಾರ ಕಾರ್ಯಕ್ರಮಗಳನ್ನು ಜಾರಿ ಮಾಡದೇ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ರೈತರಿಗೆ ಅನ್ಯಾಯ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು. ಹಸಿರು ಸೇನೆಯ ಸಣ್ಣಕ್ಕಿ ರುದ್ರಪ್ಪ, ಖಾಸಿಂಸಾಬ್, ದೇವರೆಡ್ಡಿ, ಅಬ್ದುಲ್ ರೋಫ್, ಜಡಿಯಪ್ಪ ಮತ್ತಿತ್ತರು ಉಪಸ್ಥಿತರಿದ್ರು.