ಹೊಸಪೇಟೆ (ವಿಜಯನಗರ) :ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ತಾಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಕುಡಿದು ಆರು ಜನರ ಸಾವು ಪ್ರಕರಣ ಹಿನ್ನೆಲೆ ಅಧಿಕಾರಿಗಳ ತಲೆದಂಡ ಮೂರಕ್ಕೇರಿದೆ.
ಕರ್ತವ್ಯಲೋಪದಡಿ ಹೂವಿನಹಡಗಲಿಯ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ ಡಿ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ಎಂ ಡಿ ಕುಮಾರ್ ಅವರು ಮಕರಬ್ಬಿಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಎಸೆಗಿದ್ದಾರೆ. ಜಿಲ್ಲಾ ಪಂಚಾಯತ್ ನೀಡಿದ ನೋಟಿಸ್ಗಳಿಗೆ ಅವರು ಸಮಜಾಯಿಷಿ ನೀಡಿಲ್ಲ. ಕರ್ತವ್ಯದಲ್ಲಿ ವಿಫಲ ಹಾಗೂ ಬೇಜವಾಬ್ದಾರಿತನವನ್ನು ತೋರಿದ್ದಾರೆ. ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ರಾಜ್ಯ ಸರಕಾರಕ್ಕೆ ಶಿಪಾರಸು ಮಾಡಿದ್ದರು.
ಇದನ್ನು ಆಧರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪ ಕಾರ್ಯದರ್ಶಿ ಸಿದ್ದೇಶ್ ಪೊತಲಕಟ್ಟಿ ಅವರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ ಡಿ ಕುಮಾರ್ ಅವರನ್ನು ಅಮಾನತುಗೊಳಿಸಿದ್ದಾರೆ. ಈ ಹಿಂದೆ ಮಕರಬ್ಬಿ ಗ್ರಾಮದ ಪಿಡಿಒ ಶರಣಪ್ಪ, ಜೂನಿಯರ್ ಎಂಜಿನಿಯರ್ ವಿಜಯಾನಾಯ್ಕ್ ಅವರನ್ನು ಅಮಾನತು ಮಾಡಲಾಗಿತ್ತು.