ಬಳ್ಳಾರಿ: ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಟೆನ್ಶನ್ ಶುರುವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಧಮ್ ಬಗ್ಗೆ ಕೇಳುತ್ತಿದ್ದಾರೆ. ನಿಮ್ ಧಮ್ ಕಡಿಮೆಯಾಗುತ್ತಿದೆ. ನಮ್ ಧಮ್ ಏರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಳ್ಳಾರಿ ನಗರದ ಗುರು ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆಯ ಬಹಿರಂಗ ಸಭೆಯ ಪೂರ್ವ ಸಿದ್ಧತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸಾಮರಸ್ಯ ಕಾಪಾಡಲು ಜೋಡೋ ಯಾತ್ರೆ ನಡೆಯುತ್ತಿದೆ. ಐದು ವಿಚಾರ ಇಟ್ಟುಕೊಂಡು ಐಕ್ಯತಾ ಯಾತ್ರೆ ನಡೆಯುತ್ತಿದೆ. ಬಿಜೆಪಿ ಭಾಷೆ ಮತ್ತು ಜಾತಿಯ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.
ಶಾಂತಿ, ಉದ್ಯೋಗಕ್ಕೆ, ಬೆಲೆ ಏರಿಕೆ ವಿರುದ್ದ ಐಕ್ಯತಾ ಯಾತ್ರೆ, ಸಮಾನತೆಗೆ, ರಾಜ್ಯದ ಭ್ರಷ್ಟಾಚಾರ ವಿರುದ್ಧ ಯಾತ್ರೆ ಉದ್ದೇಶ ಎಂದರು. ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದಿಂದ ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯೆಂಬ ಬಿರುದು ಬಂದಿದೆ. ನಿಮ್ಮ ಭ್ರಷ್ಟಾಚಾರದ ಬಗ್ಗೆ ನಾನು ಹೇಳುತ್ತಿಲ್ಲ. ಬಿಜೆಪಿ ಶಾಸಕರೇ ಹೇಳ್ತಾರೆ ಎಂದು ಡಿಕೆಶಿ ಹರಿಹಾಯ್ದರು.