ಬಳ್ಳಾರಿ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿರಗುಪ್ಪ ತಾಲೂಕಿನ ನಾಡಂಗ ಮತ್ತು ವೆಂಕಟಾಪುರ ಗ್ರಾಮಗಳ ಮಧ್ಯದಲ್ಲಿರುವ ನಾಳಾ ಹತ್ತಿರ ಅನುಮಾನಸ್ಪದವಾಗಿ ಲಾರಿ ಮತ್ತು ಟ್ರ್ಯಾಕ್ಟರ್ ನಿಂತಿದ್ದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಅಕ್ರಮ ಮದ್ಯ ಮತ್ತು ವಾಹನಗಳು ಸೇರಿ ಒಟ್ಟು 35,12,900 ರೂ.ಗಳ ಸ್ವತ್ತುಗಳನ್ನು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೊಸಪೇಟೆ ಅಬಕಾರಿ ಜಂಟಿ ಆಯುಕ್ತ ಎಲ್.ಮೋಹನಕುಮಾರ್, ಬಳ್ಳಾರಿ ಅಬಕಾರಿ ಉಪ ಆಯುಕ್ತ ನರೇಂದ್ರಕುಮಾರ್ ಅವರ ಆದೇಶದ ಮೇರೆಗೆ ಅಬಕಾರಿ ನಿರೀಕ್ಷಕರಾದ ತುಕಾರಾಂ ನಾಯ್ಕ್, ಪಿ.ಗಿರೀಶ್ ಮತ್ತು ಸಿಬ್ಬಂದಿಗಳಾದ ಸಿ.ದಕ್ಷಿಣಾಮೂರ್ತಿ ಮತ್ತು ಹರೀಶ್ ಸಿಂಗ್ ಅವರು ಮಂಗಳವಾರ ಸಂಜೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.