ಬಳ್ಳಾರಿ: ವಿಮ್ಸ್ ಆಸ್ಪತ್ರೆಯಲ್ಲಿ ಒಂದಿಲ್ಲೊಂದು ಸಮಸ್ಯೆ ಉಲ್ಬಣಗೊಳ್ಳುತ್ತಿರೋದು ಸರ್ವೇ ಸಾಮಾನ್ಯ. ಆದರೀಗ ಈ ಹೋಂ ಗಾರ್ಡ್ಸ್ಗೆ ಸಮಸ್ಯೆ ಎದುರಾಗಿದೆ. ಸಾರ್ವಜನಿಕ ಸ್ನೇಹಿ ಹಾಗೂ ವಿಮ್ಸ್ ಆಸ್ಪತ್ರೆಯ ಸದಾ ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸುವ ಈ ಹೋಂ ಗಾರ್ಡ್ಸ್ ಗೆ ವಿಮ್ಸ್ ಡೈರೆಕ್ಟರ್ ಎಚ್ಚರಿಕೆ ನೀಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ವಿಮ್ಸ್ ಆಸ್ಪತ್ರೆಗೆ ದಿಢೀರನೆ ಭೇಟಿ ನೀಡಿದ್ದ ವಿಮ್ಸ್ ನ ಡೈರೆಕ್ಟರ್, ಆಗ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ಸ್ ಕರ್ತವ್ಯ ನಿರ್ವಹಿಸದೇ ಹರಟೆ ಹಾಗೂ ಮೊಬೈಲ್ ನೋಡುತ್ತಾ ಕುಳಿತಿರುವುದನ್ನ ನೋಡಿದ್ದರಂತೆ. ವಿಮ್ಸ್ ಆಸ್ಪತ್ರೆ ಐಸಿಯು ವಾರ್ಡಗಳಿಗೂ ಭೇಟಿ ನೀಡಿದಾಗ, ಜನಜಂಗುಳಿಯಿಂದ ಕೂಡಿತ್ತಂತೆ. ಇದನ್ನ ಗಮನಿಸಿದ ವಿಮ್ಸ್ ಡೈರೆಕ್ಟರ್ ಟಿ.ಗಂಗಾಧರಗೌಡ ನೇರವಾಗಿ ಕಚೇರಿಗೆ ಬಂದ ತಕ್ಷಣವೇ ಹೋಂ ಗಾರ್ಡ್ಸ್ ಮುಖ್ಯಸ್ಥರನ್ನ ಕರೆಯಿಸಿ ನಿಮ್ಮ ಸೇವೆ ನಮಗೆ ಅತೃಪ್ತಿಕರವಾಗಿದೆ ಎಂದು ಹೇಳಿದ್ದರಂತೆ.
ವಿಮ್ಸ್ ಆಸ್ಪತ್ರೆಯಲ್ಲಿ ಹೋಂ ಗಾರ್ಡ್ಸ್ ಕರ್ತವ್ಯ ಲೋಪ ಆರೋಪ ಕರ್ತವ್ಯದಿಂದ ಎಲ್ಲ ಹೋಂ ಗಾರ್ಡ್ಸ್ ಅನ್ನು ತೆಗೆಯೋ ಮಾತುಗಳನ್ನಾಡಿದ್ದಾರೆ ಎನ್ನಲಾಗ್ತಿದ್ದು, ಇದರಿಂದ ಆತಂಕಗೊಂಡ ಹೋಂ ಗಾರ್ಡ್ಸ್ ನೇರವಾಗಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಭೇಟಿ ಮಾಡಿದ್ದಾರೆ. ಅಲ್ಲಿ ಕೂಡ ಸಚಿವ ಶ್ರೀರಾಮುಲು ಎಲ್ಲರೂ ಸರಿಯಾಗಿ ಕರ್ತವ್ಯ ನಿಭಾಯಿಸುವಂತೆ ಸೂಚಿಸಿದ್ದರಂತೆ. ಪದೇಪದೆ ನಿಮ್ಮ ಪರವಾಗಿ ವಿಮ್ಸ್ ಡೈರೆಕ್ಟರ್ ಅವರ ಹತ್ತಿರ ಮಾತಾಡೋಕೆ ಆಗೋಲ್ಲ. ಸರಿಯಾಗಿ ಕೆಲಸ ಮಾಡಿ ಎಂದು ಹೇಳಿದ್ದರಂತೆ.
ಈ ಬಗ್ಗೆ ಮಾತನಾಡಿದ ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ, ಹೋಂ ಗಾರ್ಡ್ಸ್ ಅನ್ನ ಕರ್ತವ್ಯದಿಂದ ತೆಗೆದು ಹಾಕುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಕೆಲಸ ಸರಿಯಾಗಿ ನಿಭಾಯಿಸಿ ಎಂದಷ್ಟೇ ಎಚ್ಚರಿಕೆಯ ಸಂದೇಶ ನೀಡಿದ್ದೇವೆ. ಐಸಿಯು ವಾರ್ಡಗಳಲ್ಲಿ ಸಾರ್ವಜನಿಕರ ಜನಜಂಗುಳಿ ಇರುತ್ತೆ. ಅದನ್ನ ಸರಿಯಾಗಿ ನಿಭಾಯಿಸದೇ ಇರೋದರಿಂದಲೇ ಹೋಂ ಗಾರ್ಡ್ಸ್ ಜಿಲ್ಲಾ ಸಮಾದೇಷ್ಟ ಎಂ.ಷಕೀಬ್ ಅವರನ್ನ ಕರೆಯಿಸಿ ವಾರ್ನ್ ಮಾಡಿದ್ದೇವೆ. ಅದು ಬಿಟ್ಟರೇ ಅವರನ್ನ ಕೆಲಸದಿಂದ ತೆಗೆಯೋ ಮಾತುಗಳನ್ನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಓದಿ : 'ರಾಣೆಬೆನ್ನೂರು ಹುಲಿ' ನಿಧನ: ನೆಚ್ಚಿನ ಹೋರಿಯ ಅಗಲಿಕೆಗೆ ಸಾವಿರಾರು ಜನರ ಕಣ್ಣೀರ ವಿದಾಯ!
ವಿಮ್ಸ್ ಆಸ್ಪತ್ರೆಯ ಹೋಂ ಗಾರ್ಡ್ಸ್ ಹೊನ್ನೂರಮ್ಮ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನಮ್ಮಗಳ ಸೇವೆ ನಿಮಗೆ ಅಗತ್ಯವಿತ್ತು, ಈಗ್ಯಾಕೆ ನಾವು ನಿಮಗೆ ಬೇಡವಾದೆವು. ನಮ್ಮ ಕರ್ತವ್ಯದಲ್ಲಿ ಏನಾದರು ಲೋಪದೋಷ ಇದ್ದರೆ ತೋರಿಸಲಿ. ಅದು ಬಿಟ್ಟು ಕೆಲಸದಿಂದ ತೆಗೆಯೋ ಮಾತುಗಳನ್ನ ಆಡಬಾರದು. ಯಾಕಂದ್ರೆ, ಇದನ್ನೇ ನೆಚ್ಚಿಕೊಂಡು ನಮ್ಮ ಕುಟುಂಬಗಳು ಬದುಕುತ್ತಿವೆ. ಆಸ್ಪತ್ರೆಯ ನಾನಾ ವಾರ್ಡಗಳಲ್ಲಿ ಸಾರ್ವಜನಿಕರ ಪ್ರವೇಶಾತಿ ನಿಷಿದ್ಧಗೊಳಿಸಿದರೆ, ರೋಗಿಗಳ ಕುಟುಂಬಸ್ಥರು ರೊಚ್ಚಿಗೇಳುತ್ತಾರೆ. ವೈದ್ಯರು ಪ್ರತಿಯೊಂದನ್ನೂ ಕೂಡ ಹೊರಗಡೆ ಚೀಟಿ ಬರೆದು ಕೊಡುತ್ತಾರೆ. ಅದನ್ನ ತೆಗೆದುಕೊಂಡು ಬಂದು ರೋಗಿಗಳ ವಾರ್ಡಗಳಿಗೆ ಸಂಬಂಧಿಕರು ನೀಡಲು ಹೋಗುತ್ತಾರೆ. ಅಂಥವರನ್ನೂ ಕೂಡ ಬಿಡಬಾರದು ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ವಿಮ್ಸ್ ಆಸ್ಪತ್ರೆಯ ಹೋಂ ಗಾರ್ಡ್ಸ್ ರಾಮು ಮಾತನಾಡಿ, ಈ ಆಸ್ಪತ್ರೆಯಲ್ಲಿ ಅಂದಾಜು 72 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಏಕಾಏಕಿ ನಮ್ಮನ್ನ ಸೇವೆಯಿಂದ ತೆಗೆಯೋ ಮಾತುಗಳನ್ನಾಡಿದ್ರೆ, ನೂರಾರು ಕುಟುಂಬಗಳು ಬೀದಿ ಪಾಲಾಗುತ್ತವೆ. ಡೈರೆಕ್ಟರ್ ಅವರು ಇದನ್ನ ಸೂಕ್ಷ್ಮವಾಗಿ ಅರಿಯಬೇಕೆಂದು ಮನವಿ ಮಾಡಿದರು.