ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನಾದ್ಯಂತ ಗಾಳಿ ಮಳೆ ಜೋರಾಗಿದೆ. ನದಿ ಪಾತ್ರದ ಹಳ್ಳಿಗಳಲ್ಲಿ ಬೆಳೆಯಲಾಗಿದ್ದ ನೂರಾರು ಎಕರೆ ಭತ್ತದ ಬೆಳೆ ನಾಶವಾಗಿದೆ. ಹಗರನೂರು ಕೆರೆ ತುಂಬಿ ಕೋಡಿ ಬಿದ್ದಿದೆ. ಇದರಿಂದ ಅಪಾರ ಪ್ರಮಾಣದ ನೀರು ಹೊಲ-ಗದ್ದೆಗಳಿಗೆ ನುಗ್ಗಿದೆ.
ಹೂವಿನಹಡಗಲಿ ತಾಲೂಕಿನಲ್ಲಿ ನಿನ್ನೆ ತಡರಾತ್ರಿ 12.2 ಮಿ.ಮೀಟರ್ ಮಳೆ ಬಿದ್ದಿದೆ. ಕಳಸಾಪುರ, ಬೂದನೂರು, ಹಿರೇಮಲ್ಲನಕೆರೆಯಲ್ಲಿ ಒಟ್ಟು 3 ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. ಕಳೆದೊಂದು ವಾರದಿಂದ ಈವರೆಗೂ 26 ಮನೆಗಳು ಬಿದ್ದಿವೆ. ಜತೆಗೆ ಬನ್ನಿಮಟ್ಟಿ, ಬ್ಯಾಲಹುಣ್ಸಿ, ಮಕರಬ್ಬಿ, ಅಂಗೂರು, ಕೋಟಿಹಾಳು, ಹೊಸಹಳ್ಳಿ, ಮಾಗಳ, ಅಲ್ಲೀಪುರ, ರಾಜವಾಳ ಸೇರಿದಂತೆ ಇತರೆ ಕಡೆಗಳಲ್ಲಿನ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ನೆಲಕಚ್ಚಿದೆ. ಭತ್ತದ ಕಾಳು ನೀರುಪಾಲಾಗಿ ರೈತರಿಗೆ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.
ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಜನ ಮನೆ ಬಿಟ್ಟು ಹೊರಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಕಟಾವು ಮಾಡಿರುವ ಮೆಕ್ಕೆಜೋಳ ಮಳೆ ನೀರಿಗೆ ಒದ್ದೆಯಾಗಿ ಬಹಳಷ್ಟು ನಷ್ಟ ಉಂಟಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹೂವಿನಹಡಗಲಿ ತಾಲೂಕಿನ ಹಗರನೂರು ಕೆರೆಗೆ ಅಪಾರ ಪ್ರಮಾಣದ ಮಳೆ ನೀರು ಹರಿದು ಬರುತ್ತಿದ್ದು, ಕೆರೆ ಸಂಪೂರ್ಣ ತುಂಬಿ ಕೋಡಿ ಬಿದ್ದಿದೆ. ಕೆರೆಯಿಂದ ಹರಿದು ಹೊರಗೆ ಹೋಗುತ್ತಿರುವ ನೀರು ಹಳ್ಳ ಸೇರುತ್ತಿದೆ. ಈಗಾಗಲೇ ಮೆಕ್ಕೆಜೋಳ, ಸಜ್ಜೆ ಕಟಾವು ಮಾಡಲು ಮಳೆ ಬಿಡುತ್ತಿಲ್ಲ. ತೆನೆಗಳು ನೆಲಕ್ಕೆ ಬಿದ್ದು ಸಾಕಷ್ಟು ಹಾನಿಯನ್ನು ರೈತರು ಅನುಭವಿಸುವಂತಾಗಿದೆ.
ನೂರಾರು ಎಕರೆ ಭತ್ತದ ಬೆಳೆ ನಾಶ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದರೂ ಕೃಷಿ ಇಲಾಖೆ ಬೆಳೆ ನಷ್ಟ ಮಾಹಿತಿ ಸಂಗ್ರಹ ಮಾಡಿಲ್ಲ. ಮಾಹಿತಿ ಕೇಳಿದಾಗ ಕೃಷಿ ಅಧಿಕಾರಿಗಳು ರೈತರ ಜಮೀನುಗಳಿಗೆ ಹೋಗಿ ನಷ್ಟವಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ಸಿದ್ಧ ಉತ್ತರ ನೀಡುತ್ತಾರೆ. ನದಿ ಪಾತ್ರ ಸೇರಿದಂತೆ ಬೇರೆಡೆಗಳಲ್ಲಿ ಸಾಕಷ್ಟು ಬೆಳೆ ಹಾನಿ ಉಂಟಾಗಿದೆ. ಆದರೆ ಅಧಿಕಾರಿಗಳು ಮಾತ್ರ ರೈತರ ಜಮೀನುಗಳಿಗೆ ಭೇಟಿ ನೀಡಿಲ್ಲ ಎಂದು ರೈತರು ದೂರಿದ್ದಾರೆ.