ಬಳ್ಳಾರಿ:ಜಿಲ್ಲೆಯ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕಂಪ್ಲಿ, ಕುರುಗೋಡು ಹಾಗೂ ಸಿರಗುಪ್ಪ ಭಾಗದ ಜನರ ನೆರವಿಗಾಗಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.
ಹೊಸಪೇಟೆ ತಾಲೂಕಿನ ತುಂಗಭದ್ರಾ ನದಿಗೆ 2,26,016 ಕ್ಯೂಸೆಕ್ ಒಳಹರಿವಿದೆ. ಸಂಜೆ 4ಕ್ಕೆ ತುಂಗಭದ್ರಾ ಅಣೆಕಟ್ಟಿನಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ 10 ಸಾವಿರ ಕ್ಯೂಸೆಕ್ ನೀರು ಹರಿಸುವ ಸಾಧ್ಯತೆ ಇದ್ದು, ಒಳಹರಿವಿನ ಪ್ರಮಾಣ ಆಧರಿಸಿ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗುತ್ತದೆ.
ಬಳ್ಳಾರಿಯಲ್ಲಿ ಮುಂದುವರಿದ ಪ್ರವಾಹ ಹೊರ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ನದಿ ಪಾತ್ರದಲ್ಲಿನ ನಗರ ಮತ್ತು ಪಟ್ಟಣದ ಜನರಿಗೆ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾಹದಿಂದ ಹೂವಿನಹಡಗಲಿ ತಾಲೂಕಿನ ಮದಲಗಟ್ಟ ಆಂಜನೇಯಸ್ವಾಮಿ ದೇವಾಲಯ ಮುಳುಗಡೆಯಾಗಿದ್ದು, ಭಕ್ತರು ನೀರಿನಲ್ಲೆ ದೇವರ ದರ್ಶನ ಪಡೆಯುತ್ತಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಸದ ದೇವೇಂದ್ರಪ್ಪ ಭೇಟಿ:
ಹಡಗಲಿ ತಾಲೂಕಿನ ಮಾಗಳ, ಅಂಗುರು, ಕೋಟಿಹಾಳ, ಮಕರಬ್ಬಿ, ಕಾಂತೆ ಬೆನ್ನೂರು, ಮೈಲಾರ, ಹರವಿ ಗ್ರಾಮಗಳಿಗೆ ಅಧಿಕಾರಿಗಳ ಜೊತೆಯಲ್ಲಿ ಸಂಸದ ದೇವೇಂದ್ರಪ್ಪ ಭೇಟಿ ನೀಡಿದರು. ಜನರೊಂದಿಗೆ ಚರ್ಚೆ ನಡೆಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ರು. ಬಳಿಕ ಕನ್ನಿಹಳ್ಳಿ ಮಠಕ್ಕೆ ತೆರಳಿ, ಜನರೊಂದಿಗೆ ಕುಳಿತು ಭಜನೆ ಮಾಡಿದ್ದು ವಿಶೇಷವಾಗಿತ್ತು.