ಕರ್ನಾಟಕ

karnataka

ETV Bharat / state

ಈರುಳ್ಳಿಗೆ ಕೊಳೆ, ಮಜ್ಜಿಗೆ ರೋಗ: ಟ್ರ್ಯಾಕ್ಟರ್​​ನಿಂದ ಬೆಳೆ ನಾಶಕ್ಕೆ ಮುಂದಾದ ರೈತರು - ಬಳ್ಳಾರಿ

ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಶಿವಶಿಂಪಿಗರ ಚಂದ್ರಶೇಖರ ಎಂಬ ರೈತ ತಮ್ಮ 3 ಎಕರೆಯಲ್ಲಿ ಬೆಳೆದ ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್ ಹರಿಸಿ ನಾಶ ಮಾಡುತ್ತಿದ್ದಾರೆ.

onion crop Destroy
ಟ್ರ್ಯಾಕ್ಟರ್​​ನಿಂದ ಈರುಳ್ಳಿ ಬೆಳೆ ನಾಶ ಮಾಡಿದ ರೈತರು

By

Published : Aug 26, 2020, 9:13 AM IST

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನಾದ್ಯಂತ ಜಿಟಿಜಿಟಿ ಮಳೆ ಬೀಳಲಾರಂಭಿಸಿದೆ. ಇದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆಗೆ ಕೊಳೆ ಹಾಗೂ ಮಜ್ಜಿಗೆ ರೋಗ ತಗುಲಿದ್ದು, ರೈತರು ಬೆಳೆ ನಾಶಕ್ಕೆ ಮುಂದಾಗಿದ್ದಾರೆ.

ಈರುಳ್ಳಿ ಬೆಳೆಗೆ ಕೊಳೆ, ಮಜ್ಜಿಗೆ ರೋಗ: ಟ್ರ್ಯಾಕ್ಟರ್​​ನಿಂದ ಬೆಳೆ ನಾಶಕ್ಕೆ ಮುಂದಾದ ರೈತರು

ತಾಲೂಕಿನ ಉತ್ತಂಗಿ ಗ್ರಾಮದ ಶಿವಶಿಂಪಿಗರ ಚಂದ್ರಶೇಖರ ಎಂಬ ರೈತ ತಮ್ಮ 3 ಎಕರೆಯಲ್ಲಿ ಬೆಳೆದ ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್ ಹರಿಸಿ ನಾಶ ಮಾಡುತ್ತಿದ್ದಾರೆ. ಹೂವಿನಹಡಗಲಿ ತಾಲೂಕಿನಲ್ಲಿ ಸುಮಾರು 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಇದರಲ್ಲಿ ಇಟ್ಟಿಗಿ, ಉತ್ತಂಗಿ, ಮಹಾಜನದಹಳ್ಳಿ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿನ 500 ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆಗೆ ಕೊಳೆ-ಮಜ್ಜಿಗೆ ರೋಗ ಕಾಣಿಸಿಕೊಂಡಿದೆ. ಅತಿಯಾದ ಮಳೆಯಾಗಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆಗೆ ಕೊಳೆ, ಮಜ್ಜಿಗೆ ರೋಗ ಹರಡಿದೆ. ಸಾಕಷ್ಟು ಔಷಧಿ ಸಂಪರಣೆ ಮಾಡಿದರೂ ಈ ರೋಗ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದ ರೋಸಿ ಹೋದ ರೈತ ಚಂದ್ರಶೇಖರಪ್ಪ ಸಂಪೂರ್ಣ ಈರುಳ್ಳಿ ಬೆಳೆ ನಾಶ ಮಾಡಿದ್ದಾರೆ.

ಈರುಳ್ಳಿ ಬೆಳೆಗೆ ಕೊಳೆ, ಮಜ್ಜಿಗೆ ರೋಗ: ಟ್ರ್ಯಾಕ್ಟರ್​​ನಿಂದ ಬೆಳೆ ನಾಶಕ್ಕೆ ಮುಂದಾದ ರೈತರು

ಈರುಳ್ಳಿ ಗಡ್ಡೆ ಕಟ್ಟುವ ಹಂತದಲ್ಲೇ ಕೊಳೆ, ಮಜ್ಜಿಗೆ ರೋಗ ಬಂದಿದೆ. ಒಂದು ವೇಳೆ ಉತ್ತಮವಾಗಿ ಈರುಳ್ಳಿ ಗಡ್ಡೆ ಬೆಳೆದ ನಂತರವೂ ಕೊಳೆ ರೋಗ ಬಂದರೆ ಗಡ್ಡೆ ಸಂಪೂರ್ಣ ಕೊಳೆತು ಹೋಗುತ್ತದೆ. ಗಡ್ಡೆ ಬೆಳೆಯುವವರೆಗೂ ಬೆಳೆ ಬಿಟ್ಟರೆ ರೈತರು ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಕೊಳೆ ಅಥವಾ ಮಜ್ಜಿಗೆ ರೋಗದ ವೈರಸ್ ಗಾಳಿ ಮೂಲಕವೂ ಹರಡುತ್ತಿದ್ದು, ಹೊಲದಲ್ಲಿ ನಡೆದಾಡಿ ಹೋಗಿ ಇನ್ನೊಂದು ಜಮೀನಿಗೆ ಹೋದರೂ ಕಾಲಿಗೆ ವೈರಸ್ ತಗುಲಿ ಪಕ್ಕದ ಜಮೀನಿನಲ್ಲಿರುವ ಈರುಳ್ಳಿ ಬೆಳೆಗೂ ಹರಡುತ್ತದೆ. ಈ ರೋಗದಿಂದ ಬೆಳೆಯನ್ನು ಸಂರಕ್ಷಣೆ ಮಾಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ರೈತರು.

ಈ ಬಾರಿ ಈರುಳ್ಳಿ ಬೆಳೆಯಲು ಕೊಟ್ಟಿಗೆ ಗೊಬ್ಬರ, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮತ್ತು ಔಷಧಿ ಸಿಂಪಡಣೆ ಸೇರಿ ಒಟ್ಟು 3 ಎಕರೆ ಪ್ರದೇಶದಲ್ಲಿನ ಈರುಳ್ಳಿ ಬೆಳೆಗೆ ಸುಮಾರು 2 ಲಕ್ಷ ರೂ. ಖರ್ಚು ಮಾಡಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ಈರುಳ್ಳಿ ಉತ್ತಮವಾಗಿ ಬೆಳೆದಿತ್ತು. ಉತ್ತಮ ಬೆಳೆ ಬಂದಿದ್ದರೆ ಈಗಿನ ಮಾರುಕಟ್ಟೆ ದರಕ್ಕೆ 10ರಿಂದ 12 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ ಕೊಳೆ, ಮಜ್ಜಿಗೆ ರೋಗ ಬಂದು ಜಮೀನಿಗೆ ಹಾಕಿದ ಬಂಡವಾಳ ವಾಪಸ್ ಬಾರದೆ ರೈತರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ ಎಂದು ಈರುಳ್ಳಿ ಬೆಳೆಗಾರ ಶಿವಶಿಂಪಿಗರ ಚಂದ್ರಶೇಖರಪ್ಪ ಬೇಸರ ವ್ಯಕ್ತಪಡಿಸಿದ್ರು.

ಈರುಳ್ಳಿ ಬೆಳೆಗೆ ಕೊಳೆ, ಮಜ್ಜಿಗೆ ರೋಗ ಬಂದಿರುವ ಹಿನ್ನೆಲೆಯಲ್ಲಿ ನಾವು ರೈತರ ಜಮೀನುಗಳಿಗೆ ಭೇಟಿ ನೀಡಿದ್ದೇವೆ. ಕೊಳೆ, ಮಜ್ಜಿಗೆ ರೋಗವನ್ನು ತಡೆಗಟ್ಟಲು ಸಾಧ್ಯವಿಲ್ಲ. ಅತಿಯಾದ ಮಳೆಗೆ ಈ ರೋಗ ಬಂದಿದೆ. ಎನ್‍ಡಿಆರ್​​​ಎಫ್ ನಿಯಮಗಳ ಪ್ರಕಾರ ಬೆಳೆ ಪರಿಹಾರದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ವಾಸ್ತವ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುತ್ತೇವೆ. ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತೇವೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದುರ್ಗಾ ಪ್ರಸಾದ್​ ತಿಳಿಸಿದ್ದಾರೆ.

ABOUT THE AUTHOR

...view details