ಬಳ್ಳಾರಿ: ಬಳ್ಳಾರಿ ತಾಲೂಕಿನ ಗಡಿಯಂಚಿನ ನಾನಾ ಗ್ರಾಮಗಳಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಗೆ ಕಾಯಿಕೊಳೆ ರೋಗ, ಬೂದಿರೋಗ ಅಂಟಿಕೊಂಡಿದೆ. ಇದರಿಂದ ಶೇ. 60ರಷ್ಟು ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ.
ತಾಲೂಕಿನ ಹಗರಿ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದ ಸುತ್ತಲಿನ ನಾನಾ ಗ್ರಾಮಗಳಲ್ಲಿನ ಮಳೆಯಾಶ್ರಿತ ಜಮೀನುಗಳಲ್ಲಿ ಬೆಳೆದಿದ್ದ ಗುಂಟೂರು ಮೆಣಸಿನಕಾಯಿ ಬೆಳೆಗೆ ಈ ರೋಗವು ಅಂಟಿಕೊಂಡಿದೆ. ಇದರಿಂದ ಮೆಣಸಿನಕಾಯಿ ಬೆಳೆಯ ಇಳುವರಿ ಕೂಡ ಕಡಿಮೆಯಾಗುವ ಭೀತಿ ಇದ್ದು, ರೈತರು ಇನ್ನಷ್ಟು ಆರ್ಥಿಕ ಹೊಡೆತ ಅನುಭವಿಸುವ ಆತಂಕಕ್ಕೆ ಒಳಗಾಗಿದ್ದಾರೆ.
ಗುಂಟೂರು ಮೆಣಸಿನಕಾಯಿಗೆ ಕೊಳೆರೋಗ ಈ ಬಾರಿ ಚಳಿ ಹೆಚ್ಚಾಗಿರುವುದರಿಂದ ಬೆಳಗ್ಗೆಯ ಹೊತ್ತು ತೇವಾಂಶ ಕಡಿಮೆಯಿರಲಿದ್ದು, ಇದರಿಂದ ಕಾಯಿಗಳಿಗೆ ಕೊಳೆರೋಗ ಅಂಟಿಕೊಳ್ಳುತ್ತಿದೆ. ಈ ಭೂಮಿಯಲ್ಲಿ ತೇವಾಂಶ ಹೆಚ್ಚಾದರೆ ಮಳೆಯಾಶ್ರಿತ ಬೆಳೆಗಳೆಲ್ಲಾ ಸಂಪೂರ್ಣವಾಗಿ ನಾನಾ ಕಾಯಿಲೆಗಳಿಂದ ಬಳಲುತ್ತಿರುತ್ತವೆ. ಆದರಲ್ಲೂ ಈ ಮೆಣಸಿನಕಾಯಿ ಬೆಳೆಗಂತೂ ವಿಪರೀತ ಕಾಯಿಲೆ ಹರಡುವಿಕೆ ಹೆಚ್ಚಾಗುತ್ತದೆ ಎಂದು ಇಲ್ಲಿನ ಕೃಷಿ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಹಗರಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ಜಯಪ್ರಕಾಶ್ ನಾರಾಯಣ್ ಅವರು, ಕಾಯಿಕೊಳೆ ರೋಗವನ್ನು ಹತೋಟಿಗೆ ತರಲು ಕ್ರಿಮಿನಾಶಕವನ್ನು ಕೂಡಲೇ ಸಿಂಪಡಣೆ ಮಾಡಬೇಕು. ಉಳುಮೆ ಮಾಡಿದ 10 ತಿಂಗಳ ಬಳಿಕವೇ ಕೆಲವೊಂದಿಷ್ಟು ಕ್ರಿಮಿನಾಶಕ ಔಷಧಿಗಳನ್ನು ಸಿಂಪಡಣೆ ಮಾಡಿದರೆ ಸಾಕು, ಈ ರೋಗವನ್ನು ನಿಯಂತ್ರಣಕ್ಕೆ ತರಬಹುದು. ಇದೀಗ ಶೇ.60ರಷ್ಟು ಬೆಳೆನಷ್ಟ ಉಂಟಾಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಧಾರಣೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಬೂದಿರೋಗದಿಂದ ತೂಕ ಕಡಿಮೆಯಾಗಿ, ಮೆಣಸಿನಕಾಯಿಗಳೆಲ್ಲಾ ತುಂಡರಿಸಿ ಬೀಳುವ ಲಕ್ಷಣ ಹೆಚ್ಚಾಗಿ ಕಂಡುಬರುತ್ತೆ ಎಂದಿದ್ದಾರೆ.