ಬಳ್ಳಾರಿ: ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಜಿಲ್ಲಾದ್ಯಂತ ಚುರುಕುಗೊಂಡಿರೋದು ಒಂದೆಡೆಯಾದರೆ, ಮತ್ತೊಂದೆಡೆ ಸಣ್ಣ, ಅತಿ ಸಣ್ಣ ರೈತರ ಬದುಕು- ಬವಣೆ ಹೇಳತೀರದಾಗಿದೆ.
ಉಳುಮೆಗೆ ಹೆಗಲು ಕೊಟ್ಟ ಮಕ್ಕಳು: ಬಾಳ ಬುತ್ತಿಯನ್ನ ತುಂಬಿಸಿಕೊಳ್ಳಲು ರಾಸುಗಳ ಪಾತ್ರ ನಿರ್ವಹಣೆ ಹೌದು, ದೊಡ್ಡ ದೊಡ್ಡ ರೈತರು ಅತ್ಯಾಧುನಿಕ ಯಂತ್ರೋಪಕರಣಗಳನ್ನ ಬಳಕೆ ಮಾಡಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದರೆ, ಸಣ್ಣ- ಅತಿ ಸಣ್ಣ ರೈತರು ಉಳುಮೆಗೆ ರಾಸುಗಳಿಲ್ಲದೇ ಪಡಲಾರದ ಪಡಿಪಾಟಲು ಪಡುತ್ತಿದ್ದಾರೆ. ಇಲ್ಲೊಬ್ಬ ರೈತ ತಮ್ಮ ಮಕ್ಕಳಿಗೆ ರಾಸುಗಳ ಪಾತ್ರ ನಿರ್ವಹಣೆಯ ಜವಾಬ್ದಾರಿ ನೀಡಿದ್ದಾರೆ.
ರಾಸುಗಳ (ಎತ್ತುಗಳ) ಜಾಗದಲ್ಲಿ ತಮ್ಮ ಇಬ್ಬರ ಮಕ್ಕಳ ಹೆಗಲಿಗೆ ಉಳುಮೆಯ ನೊಗ ಹೊರಿಸಿ ಉಳುಮೆ ಮಾಡುತ್ತಿವ ದೃಶ್ಯ ಕಣ್ಣಿಗೆ ಕಟ್ಟುವಂತಿದೆ. ಈ ಬಡತನ ಅಂದ್ರೆ ಹಾಗೇನೆ. ಅದು ಮನುಷ್ಯನನ್ನ ಎಂತಹ ಸ್ಥಿತಿಗಾದ್ರೂ ಕೊಂಡೊಯ್ಯುತ್ತೆ ಅನ್ನೋದಕ್ಕೆ ಈ ಮನಕಲಕುವ ದೃಶ್ಯವೇ ತಾಜಾ ಉದಾಹರಣೆ. ಗಣಿನಾಡು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಮಲ್ಲನಕೆರೆ ಗ್ರಾಮದ ನೆಲ್ಕುದ್ರಿ ರೈತ ಹನುಮಂತಪ್ಪ ಅವರು ತನ್ನ ಮಕ್ಕಳ ಹೆಗಲ ಮೇಲೆ ಉಳುಮೆಯ ನೊಗ ಹೊರಿಸಿ ಹೊಲ ಉಳುಮೆ ಮಾಡಲು ಮುಂದಾಗಿದ್ದಾರೆ.
ಅನಕ್ಷರಸ್ಥ ಹಾಗೂ ಕಡುಬಡ ಕುಟುಂಬದ ಹಿನ್ನೆಲೆಯುಳ್ಳ ಹನುಮಂತಪ್ಪ ಅವರು ತನ್ನ ಮಕ್ಕಳಾದ ರಮೇಶ (21), ಕುಮಾರ (16) ಅವರನ್ನ ರಾಸುಗಳಾಗಿ (ಎತ್ತುಗಳ) ಬಳಕೆ ಮಾಡಿಕೊಂಡೇ ತಮ್ಮ ಹೊಲದಲ್ಲಿ ಈ ಬಾರಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಈ ಮುಖೇನ ಮಕ್ಕಳು ತನ್ನ ತಂದೆಯ ಹೆಗಲಿಗೆ ಹೆಗಲಾಗಿದ್ದಾರೆ. ಕಡು ಬಡತನ, ಬಾಡಿಗೆಗೆ ಟ್ರ್ಯಾಕ್ಟರ್ ಪಡೆಯದೇ, ಎತ್ತುಗಳನ್ನ ಖರೀದಿಸುವಷ್ಟು ಶಕ್ತಿಯಿಲ್ಲದೇ ಇರುವುದರಿಂದ ಕಳೆದ 2 ವರ್ಷದಿಂದ ಈ ಮಕ್ಕಳನ್ನೇ ರಾಸುಗಳಂತೆ ಬಳಕೆ ಮಾಡಿಕೊಂಡು ಹೊಲ ಉಳುಮೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೇವಲ ಒಂದು ಎಕರೆ ಮಾತ್ರ ಖುಷ್ಕಿ ಭೂಮಿಯಿದ್ದು, ಮಳೆ ಬಂದರೇ ಮಾತ್ರ ಬೆಳೆ. ಇಲ್ಲದಿದ್ದರೇ ಕೂಲಿ, ನಾಲಿ ಮಾಡಿ ಜೀವನ ಸಾಗಿಸಬೇಕು. ಹೀಗಾಗಿ ಮನೆಯಲ್ಲಿರುವ ತಂದೆ - ತಾಯಿ ಮತ್ತು ಇಬ್ಬರು ಮಕ್ಕಳು ಒಂದು ಎಕರೆ ಹೊಲದಿಂದಲೇ ಜೀವನ ಕಟ್ಟಿ ಕೊಳ್ಳಲು ಮುಂದಾಗಿದ್ದಾರೆ.
ಈ ಮುಂಚೆ ಮತ್ತೊಬ್ಬರ ಹೊಲವನ್ನು ಗುತ್ತಿಗೆಗೆ ಪಡೆದು ಉಳುಮೆ ಮಾಡುತ್ತಿದ್ದರು. ಆ ಗುತ್ತಿಗೆದಾರ ರೈತರ ಎತ್ತುಗಳೊಂದಿಗೆಯೇ ತಮ್ಮ ಹೊಲ ಉಳುಮೆ ಮಾಡಿ ಕೊಳ್ಳುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಅವರು ಕೂಡ ಗುತ್ತಿಗೆ ಆಧಾರಿತ ಹೊಲ ಬಿಡಿಸಿಕೊಂಡಿರುವುದರಿಂದ ವಿಧಿಯಿಲ್ಲದೇ ತಮ್ಮ ಹೊಲದಲ್ಲೇ ಮಾತ್ರ ಬಿತ್ತನೆ ಮಾಡುತ್ತಿದ್ದಾರೆ. ಕಡು ಬಡತನದ ಹಿನ್ನೆಲೆಯಲ್ಲಿ ಈ ಇಬ್ಬರು ಮಕ್ಕಳು ಕನಿಷ್ಠ ವಿದ್ಯಾರ್ಹತೆಯನ್ನೂ ಕೂಡ ಹೊಂದಿಲ್ಲ. ವಿದ್ಯಾಭ್ಯಾಸವನ್ನ ಅರ್ಧದಲ್ಲೇ ಮೊಟಕುಗೊಳಿಸಿ ತಂದೆಯ ಜೊತೆಗೆ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
ಕಳೆದ ವರ್ಷವು ಇದೇ ರೀತಿ ಮಕ್ಕಳ ಹೆಗಲಿಗೆ ನೊಗಕಟ್ಟಿ ಬಿತ್ತನೆ ಮಾಡಿದ್ದೆ. ಆ ವರ್ಷ ಕೂಡ ಬೆಳೆ ಸರಿಯಾಗಿ ಬರಲಿಲ್ಲ. ಈ ವರ್ಷವು ಸಾಲಮಾಡಿ, ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದೇನೆ. ನನಗೆ ಈ ಸರ್ಕಾರದಿಂದ ಯಾವುದೇ ಸಹಾಯಧನ ದೊರೆತಿಲ್ಲ. ಕೃಷಿ ಇಲಾಖೆಯಲ್ಲಿ ಈ ಕುರಿತು ಸಂಪರ್ಕಿಸಿದರೂ ನಮ್ಮನ್ನು ಯಾರು ಕಣ್ಣೆತ್ತಿ ಸಹ ನೋಡುತ್ತಿಲ್ಲ ಎಂದು ರೈತ ಹನುಮಂತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಹಲವು ರೈತರದ್ದು ಇದೇ ಪರಿಸ್ಥಿತಿ: ಜಿಲ್ಲೆಯಲ್ಲಿರುವ 3 ಲಕ್ಷ ಸಣ್ಣ ರೈತರ ಪೈಕಿ ಬಹುತೇಕ ರೈತರ ಪರಿಸ್ಥಿತಿ ಇದೆಯಾಗಿದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದೇ, ಬಂದರೂ ಬೆಳೆಗೆ ಸರಿಯಾದ ಬೆಲೆ ಸಿಗದೆ ಪ್ರತಿವರ್ಷ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಬಾರಿ ಕೊರೊನಾ ಬಂದು ರೈತರನ್ನು ಮತ್ತಷ್ಟು ಹೈರಾಣಾಗಿಸಿದೆ. ಇದರ ಮಧ್ಯದಲ್ಲಿ ಇಂತಹ ಹಲವು ರೈತರು ಕೃಷಿಯಿಂದಲೇ ಬದುಕು ಕಟ್ಟಿ ಕೊಳ್ಳಲು ಹೆಣಗಾಡುತ್ತಿದ್ದಾರೆ.