ಬಳ್ಳಾರಿ:ಬಳ್ಳಾರಿ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ನಡುವಿನ ರಜೆ ವಿಚಾರ ಸಾರ್ವಜನಿಕವಾಗಿ ಬಹಿರಂಗಗೊಂಡಿದೆ. ಮಾನಸಿಕ ನೆಮ್ಮದಿಗಾಗಿ ಒಂದು ತಿಂಗಳು ರಜೆ ಬೇಕೆಂದು ಅರ್ಜಿ ಸಲ್ಲಿಸಿದ್ದ ಡಿವೈಎಸ್‌ಪಿಗೆ ಬಳ್ಳಾರಿ ಜಿಲ್ಲಾ ಎಸ್‌ಪಿ ಕೇವಲ ಐದು ದಿನಗಳ ರಜೆ ಮಾತ್ರ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ನಡುವಿನ ವಿಚಾರ ಈಗ ಬಹಿರಂಗವಾಗಿದೆ. ಈ ಕುರಿತು ದೂರಿನ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಅಪ್ರಾಪ್ತನ ಕೈಗೆ ಬೈಕ್ ಕೊಟ್ಟ ಮಾಲೀಕನಿಗೆ ₹20 ಸಾವಿರ ದಂಡ ವಿಧಿಸಿದ ತೀರ್ಥಹಳ್ಳಿ ಕೋರ್ಟ್
ಸಂಡೂರು ಡಿವೈಎಸ್‌ಪಿ ಎಸ್.ಎಸ್. ಕಾಶಿ ಅವರು ವೈಯಕ್ತಿಕ ಕಾರಣಕ್ಕೆ ಒಂದು ತಿಂಗಳು ರಜೆಗಾಗಿ ಮನವಿ ಮಾಡಿದ್ದರು. ಮಾನಸಿಕ ನೆಮ್ಮದಿಗಾಗಿ, ಧ್ಯಾನ, ಯೋಗ, ಪ್ರಾರ್ಥನೆ ಮಾಡಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವುದಕ್ಕಾಗಿ ಒಂದು ತಿಂಗಳು ವೈಯಕ್ತಿಕ ರಜೆ ನೀಡಬೇಕೆಂದು ಅವರು ಕೋರಿದ್ದರು. ಆದರೆ ನನಗೆ ಕೇವಲ 5 ದಿನಗಳ ಕಾಲ ರಜೆ ಮಂಜೂರು ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಿರಿಯ ಅಧಿಕಾರಿಗಳಿಗೆ ದೂರು:ಈ ರಜೆ ವಿಚಾರವಾಗಿ ಡಿವೈಎಸ್‌ಪಿ ಎಸ್.ಎಸ್. ಕಾಶಿ ಹಿರಿಯ ಅಧಿಕಾರಿಗಳಿಗೆ ದೂರಿನ ಪತ್ರ ಬರೆದಿದ್ದಾರೆ. ಎಸ್‌ಪಿ ವಿರುದ್ಧ ಸಂಡೂರು ಡಿವೈಎಸ್‌ಪಿ ಅವರು, ಡಿಜಿ, ಐಜಿಪಿ, ಎಡಿಜಿಪಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ. ಒಂದು ತಿಂಗಳು ರಜೆ ಕೇಳಿದರೆ ಕೇವಲ 5 ದಿನ ರಜೆ ನೀಡಲಾಗಿದೆ. ಮಾನಸಿಕ ನೆಮ್ಮದಿ ಇಲ್ಲದೆ ಕರ್ತವ್ಯದ ವೇಳೆ ಲೋಪವಾದರೆ ಇಲಾಖೆಯೇ ಹೊಣೆ ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.