ಬಳ್ಳಾರಿ:ಪ್ರಚೋದನಕಾರಿ ಭಾಷಣದ ಆರೋಪದಡಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.
ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರ ನೇತೃತ್ವದಲ್ಲಿ ಎಂಎಲ್ಸಿಗಳಾದ ಅಲ್ಲಂ ವೀರಭದ್ರಪ್ಪ, ಸೈಯದ್ ನಾಸೀರ್ ಹುಸೇನ್, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರು ಸೇರಿದಂತೆ ಇತರರು ತೆರಳಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕ ರೆಡ್ಡಿ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಆಗ್ರಹ ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಬಳ್ಳಾರಿಯ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಮಾತನಾಡಿ, ನಾವು ಕರೆಕ್ಟ್ ಆಗಿ ವಿಚಾರಣೆ ಮಾಡುತ್ತಿದ್ದೇವೆ. ವಿಚಾರಣೆ ತನಿಖಾ ಹಂತದಲ್ಲಿದೆ. ಆ ಕುರಿತು ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಹಂಪಿ ಉತ್ಸವ ಮುಗಿದ ಬಳಿಕ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ವಿರುದ್ಧ ದಾಖಲಾದ ಪ್ರಚೋದನಕಾರಿ ಭಾಷಣ ಆರೋಪದ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದೇವೆ. ಈಗ ತನಿಖೆ ವಿಚಾರಣೆ ಹಂತದಲ್ಲಿದೆ. ನಾವು ತನಿಖೆಯಾದ ಬಳಿಕ ಅವರನ್ನ ಬಂಧಿಸಬೇಕೋ ಅಥವಾ ಬೇಡವೋ ಎಂಬುದರ ಕುರಿತು ಕಾನೂನಾತ್ಮಕವಾಗಿ ವಿಚಾರಿಸುವುದಾಗಿ ತಿಳಿಸಿದರು.
ಎಂಎಲ್‌ಸಿ ಅಲ್ಲಂ ವೀರಭದ್ರಪ್ಪ ಮಾತನಾಡಿ, ಪ್ರಚೋದನ ಕಾರಿ ಭಾಷಣದ ಆರೋಪದಡಿ ಶಾಸಕ ಸೋಮಶೇಖರರೆಡ್ಡಿ ಅವರನ್ನ ಕೂಡಲೇ ಬಂಧಿಸಬೇಕು. ಇಲ್ಲಾಂದ್ರೆ ಐದು ಜಿಲ್ಲೆ ಕಾರ್ಯಕರ್ತರನ್ನೊಳಗೊಂಡಂತೆ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಕರೆಕೊಟ್ಟಂತೆ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಕಾರ್ಯಕರ್ತರು ಇಲ್ಲಿ ಸೇರಲಿದ್ದು, ಶಾಸಕ ರೆಡ್ಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಈ ಪ್ರತಿಭಟನೆ ಕೈಗೊಳ್ಳಲಾಗುವುದು. ಆದ್ರೆ ಪೊಲೀಸ್ ಇಲಾಖೆ 25 ದಿನಗಳ ಕಾಲಾವಕಾಶ ಕೇಳಿದೆ. ಅಲ್ಲಿಯವರೆಗೆ ಕಾದು ನೋಡೋಣ ಎಂದು ಅಲ್ಲಂ ವೀರಭದ್ರಪ್ಪ ತಿಳಿಸಿದರು.