ಬಳ್ಳಾರಿ:ಜಿಲ್ಲೆಯ ವಿವಿಧ ಬ್ಯಾಂಕುಗಳಲ್ಲಿ ಹೊಂದಿರುವ ಉಳಿತಾಯ ಖಾತೆಗಳಿಂದ ಲಕ್ಷ ರೂ. ಗಿಂತ ಅಧಿಕ ಹಣ ಜಮೆ ಮಾಡಿದರೆ ಮತ್ತು ಡ್ರಾ ಮಾಡಿದರೆ ಅವುಗಳ ವರದಿಯನ್ನು ದಿನಾಲು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾತ್ ಮನೋಹರ್, ಬ್ಯಾಂಕ್ ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದ್ದಾರೆ.
ಲೋಕಸಭಾ ಚುನಾವಣಾ ನಿಮಿತ್ತ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ವ್ಯವಸ್ಥಾಪಕರ ಸಭೆಯಲ್ಲಿ ಅವರು ಮಾತನಾಡಿ, ಕಳೆದ ಎರಡು ತಿಂಗಳ ಅವಧಿಯಲ್ಲಿ ದಿಢೀರ್ ಆಗಿ ಡ್ರಾ ಮಾಡುತ್ತಿದ್ದರೆ ಅಂತಹ ಬ್ಯಾಂಕ್ ಖಾತೆಗಳ ವಿವರ ಸಹ ನೀಡಬೇಕು. ಕಳೆದ ಎರಡು ತಿಂಗಳಲ್ಲಿ 1 ಲಕ್ಷಕ್ಕಿಂತಲೂ ಅಧಿಕ ವ್ಯವಹಾರ ನಡೆದಿದ್ದರೂ ಅದರ ಮಾಹಿತಿ ನೀಡಿ. ಅಂತಹ ಖಾತೆಗಳತ್ತ ವಿಶೇಷ ಗಮನ ಹರಿಸಲು ಅನುಕೂಲ ಆಗುತ್ತದೆ ಎಂದರು.
ಜಿಲ್ಲೆಯಲ್ಲಿ 320 ಬ್ಯಾಂಕ್ ಶಾಖೆಗಳಿದ್ದು, ಅವುಗಳೆಲ್ಲವುದರ ವರದಿಯನ್ನು ಬ್ಯಾಂಕ್ ಮ್ಯಾನೇಜರ್ಗಳು ಮತ್ತು ಕೋ-ಆರ್ಡಿನೇಟರ್ಗಳು ಪ್ರತಿನಿತ್ಯ ವರದಿಯನ್ನು ಚುನಾವಣಾ ವೆಚ್ಚ ಪರಿಶೀಲನಾ ವಿಭಾಗಕ್ಕೆ ಸಲ್ಲಿಸಬೇಕು. ವಾರದ ವರದಿ ಸಲ್ಲಿಸುವುದು ಕಡ್ಡಾಯ ಎಂದು ವಿವರಿಸಿದ ಅವರು ನಿಗದಿಪಡಿಸಿದ ಅವಧಿಯೊಳಗೆ ವರದಿ ಸಲ್ಲಿಸದಿದ್ದಲ್ಲಿ ಪ್ರಜಾಪ್ರಾತಿನಿಧಿ ಕಾಯಿದೆ ಸೆಕ್ಷನ್ 32ರ ಅನ್ವಯ ಬ್ಯಾಂಕಿನ ವ್ಯವಸ್ಥಾಪಕ ಮತ್ತು ಬ್ಯಾಂಕ್ ಕೋ-ಆರ್ಡಿನೇಟರ್ಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ತಾವು ಕೂಡ ಚುನಾವಣಾ ಮಶಿನರಿಗಳು, ಇ-ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಹಣದ ಹರಿವು ಉಂಟಾಗುವ ಸಾಧ್ಯತೆ ಇದ್ದು, ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.