ಬಳ್ಳಾರಿ: ಗಣಿನಗರಿ ಬಳ್ಳಾರಿಯಲ್ಲಿ 61 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಬಳ್ಳಾರಿ ನಗರದ ಡಾ. ರಾಜ್ ರಸ್ತೆಯಲ್ಲಿರುವ ಜಿಲ್ಲಾ ಕೋವಿಡ್ - 19 ಆಸ್ಪತ್ರೆಯಲ್ಲಿನ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ-1185 ಸಾವಿಗೀಡಾಗಿದ್ದು, ಆ ವ್ಯಕ್ತಿ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ತಿಂಗಳು ಬೈಪಾಸ್ ಸರ್ಜರಿಗೂ ಒಳಪಟ್ಟಿದ್ದರು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ನಿನ್ನೆ ತಡರಾತ್ರಿ ರೋಗಿಯ ಸಂಬಂಧಿಕರನ್ನು ಜಿಲ್ಲಾಸ್ಪತ್ರೆಗೆ ಕರೆಸಿ ಅವರ ಆರೋಗ್ಯದ ಸ್ಥಿತಿಗತಿಯ ಕುರಿತು ಮನವರಿಕೆ ಮಾಡಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನ ನುರಿತ ತಜ್ಞರಿಂದ ಪಿ-1185 ರೋಗಿಗೆ ಸತತ ಚಿಕಿತ್ಸೆ ನೀಡಿದರೂ ಫಲಿಸಲಿಲ್ಲ. ಹೀಗಾಗಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಡಿಸಿ ನಕುಲ್ ಸ್ಪಷ್ಟಪಡಿಸಿದ್ದಾರೆ.
ಗಣೇಶ್ ಕಾಲೋನಿ ಕಂಟೈನ್ಮೆಂಟ್ ಪ್ರದೇಶ:
ಸೋಂಕಿತ ವ್ಯಕ್ತಿ ತಂಗಿದ್ದ ನಗರದ ಸತ್ಯನಾರಾಯಣಪೇಟೆಯ ಗಣೇಶ ಕಾಲೋನಿಯ 6ನೇ ಕ್ರಾಸ್ನ 100 ಮೀಟರ್ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವೆಂದು ಜಿಲ್ಲಾಡಳಿತ ಘೋಷಿಸಿದೆ. ಇಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.