ಬಳ್ಳಾರಿ:ಗಣಿನಾಡಿನಉಭಯ ಜಿಲ್ಲೆಗಳ ಪೈಕಿ ಸುಮಾರು 346 ಗ್ರಾಮಗಳು ಕೊರೊನಾ ಸೋಂಕಿನಿಂದ ಮುಕ್ತವಾಗಿರೋದು ಸಮಾಧಾನದ ಸಂಗತಿ. ಆದರೆ, ಸೋಂಕಿನಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಅವಿಭಜಿತ ಜಿಲ್ಲೆಯ ಪೈಕಿ ಈಗಾಗಲೇ 237 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1043 ಗ್ರಾಮಗಳ ಪೈಕಿ 346 ಗ್ರಾಮಗಳು ಸೋಂಕು ಮುಕ್ತವಾಗಿವೆ. 571 ಗ್ರಾಮಗಳಲ್ಲಿ 10 ಕ್ಕಿಂತ ಕಡಿಮೆ ಕೋವಿಡ್ ಕೇಸ್‌ಗಳು ವರದಿ ಯಾಗಿವೆ. ಈ ಪೈಕಿ ಹರಪನಹಳ್ಳಿ- 82, ಕೂಡ್ಲಿಗಿ-77, ಸಂಡೂರು-54, ಹಡಗಲಿ-38, ಸಿರುಗುಪ್ಪ-26, ಹಗರಿಬೊಮ್ಮನಹಳ್ಳಿ-23, ಕೊಟ್ಟೂರು-16, ಹೊಸಪೇಟೆ-16, ಬಳ್ಳಾರಿ- 08, ಕಂಪ್ಲಿಯ 6 ಗ್ರಾಮಗಳಿವೆ.
ಚೇತರಿಸಿಕೊಳ್ಳದ ಕುರುಗೋಡು:
ಜಿಲ್ಲೆಯ ಕುರುಗೋಡು ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಮಾತ್ರ ಸೋಂಕಿತರಿದ್ದಾರೆ. ಇಲ್ಲಿಯ ಯಾವುದೊಂದು ಗ್ರಾಮವೂ ಈವರೆಗೂ ಕೊರೊನಾ ಮುಕ್ತವಾಗಿಲ್ಲ. ಉಳಿದ ತಾಲೂಕುಗಳಲ್ಲಿ ಅನೇಕ ಗ್ರಾಮಗಳು ಸೋಂಕಿನಿಂದ ಮುಕ್ತಿ ಪಡೆದುಕೊಂಡಿವೆ. 10ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಗ್ರಾಮಗಳ ಸಂಖ್ಯೆಯೂ ಕೇವಲ 126 ಮಾತ್ರ ಇದೆ. ಈವರೆಗೆ ಗ್ರಾಮೀಣ ಭಾಗದಲ್ಲಿ 14,345 ಮಂದಿ ಸೋಂಕಿಗೆ ಗುರಿಯಾಗಿದ್ದು, 4,361 ಮಾತ್ರ ಸಕ್ರಿಯ ಪ್ರಕರಣಗಳಿವೆ.
ಕೊರೊನಾ ಅಬ್ಬರ ಇಳಿಮುಖವಾಗುತ್ತಿದೆ ಎನ್ನುವಷ್ಟರಲ್ಲಿಯೇ ಕಪ್ಪು ಶಿಲೀಂಧ್ರ ತನ್ನ ರುದ್ರಪ್ರತಾಪ ತೋರಿಸುತ್ತಿರೋದು ಆರೋಗ್ಯ ಇಲಾಖೆಗೆ ತಲೆನೋವು ತಂದಿದೆ. ಈವರೆಗೆ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,380ರ ಗಡಿಗೆ ಬಂದು ನಿಂತಿದ್ದರೆ, ಇತ್ತ ಈಗಾಗಲೇ ಉಭಯ ಜಿಲ್ಲೆಗಳ ಪೈಕಿ 64 ಮಂದಿಗೆ ಈ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಸಿರುಗುಪ್ಪ ತಾಲೂಕಿನ ಗ್ರಾಮವೊಂದರ ಬಾಲಕಿಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಉಭಯ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹಲವು ಹಳ್ಳಿಗಳು ಕೊರೊನಾ ಮುಕ್ತ ಗ್ರಾಮಗಳಾಗಿವೆ. ಆದರೆ, ಈ ಮಧ್ಯೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ಕಡಿವಾಣಕ್ಕೆ ಆರೋಗ್ಯ ಇಲಾಖೆಯಿಂದ ಸಮರ್ಪಕವಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆಂದು ಡಿಹೆಚ್ಒ ಡಾ.ಹೆಚ್.ಎಲ್. ಜನಾರ್ಧನ್ ತಿಳಿಸಿದ್ದಾರೆ.