ಬಳ್ಳಾರಿ:ಇಲ್ಲಿನ ಮಯೂರ ಹೋಟೆಲ್ ಹಿಂಭಾಗದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ಶಂಕಿತ ಕೊರೊನಾ ಸೋಂಕಿತರಿಗಾಗಿ ಮೀಸಲಿಡಲಾಗಿದೆ. ಆದರೆ ಈ ಸೆಂಟರ್ನಲ್ಲಿ ಕ್ಲೀನಿಂಗ್ ವ್ಯವಸ್ಥೆ ಇಲ್ಲದ ಕಾರಣ ಶಂಕಿತರಿಗೂ ಕೊರೊನಾ ಹರಡುವ ಭೀತಿ ಎದುರಾಗಿದೆ.
ಅವ್ಯವಸ್ಥೆಯ ಆಗರವಾದ ಕ್ವಾರಂಟೈನ್ ಕೇಂದ್ರ, ಗೇಟಿನ ಬಳಿ ಕೊರೊನಾ ಶಂಕಿತರ ಪ್ರತಿಭಟನೆ ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯದಲ್ಲಿರುವ ಮಂದಿ ಸಿಬ್ಬಂದಿಯ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳುವವರೆಗೂ ನಿಲಯದೊಳಗೆ ಹೋಗುವುದಿಲ್ಲ ಎಂದು ಗೇಟಿನ ಬಳಿ ನಿಂತು ಪ್ರತಿಭಟಿಸಿದ್ದಾರೆ.
ಅಲ್ಲದೆ ನಮಗೆ ಯಾವುದೇ ರೋಗ ಲಕ್ಷಣಗಳಿಲ್ಲ, ರಕ್ತದ ಮಾದರಿಯ ಸ್ಯಾಂಪಲ್ ತೆಗೆದುಕೊಂಡು ಹೋಗಿ 3 ದಿನವಾದರೂ ಈವರೆಗೂ ರಿಪೋರ್ಟ್ ಬಂದಿಲ್ಲ. ನಿಲಯದಲ್ಲಿ ಕಸದ ರಾಶಿ ಬಿದ್ದಿದೆ. ಅದರಿಂದ ಸೊಳ್ಳೆಗಳ ಕಾಟವಂತೂ ಬಲು ಜೋರಾಗಿದೆ. ನಾವೇನು ರೋಗ ಹಚ್ಚಿಕೊಂಡು ಇಲ್ಲಿಂದ ಹೊರಹೋಗಬೇಕಾ? ಎಂದು ಪ್ರಶ್ನಿಸಿದ್ದಾರೆ.
ಯಾರಿಗೆ ಕರೆ ಮಾಡಿದರೂ ಸರಿಯಾಗಿ ಸ್ಪಂದಿಸುವುದಿಲ್ಲ. ಅಧಿಕಾರಿಗಳು ಬರುವವರೆಗೂ ನಾವು ಒಳಗೆ ಹೋಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.