ಬಳ್ಳಾರಿ:ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖರಾದ ನಗರದ ವ್ಯಕ್ತಿಯೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೊರೊನಾದಿಂದ ಸಂಪೂರ್ಣ ಗುಣಮುಖರಾದ ಬಳಿಕ ಇದರ ವಿರುದ್ಧ ಜಾಗೃತಿ ಮೂಡಿಸಲು ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಕೊರೊನಾ ಗೆದ್ದು ಬಂದ ಬಳ್ಳಾರಿಯ ವ್ಯಕ್ತಿ: ಫೇಸ್ಬುಕ್ನಲ್ಲಿ ಅನುಭವ ಹಂಚಿಕೊಂಡ್ರು - ವಿಡಿಯೋ
ಕೊರೊನಾ ಭಯದ ನಡುವೆ ಸೋಂಕಿನಿಂದ ಗುಣಮುಖರಾಗಿ ಮನೆಗೆ ಬಂದಿರುವ ವ್ಯಕ್ತಿಯೋರ್ವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೇಸ್ಬುಕ್ನಲ್ಲಿ ವಿಡಿಯೋ ಮಾಡುವ ಮೂಲಕ ಕೊರೊನಾ ಜಾಗೃತಿಗೆ ಮುಂದಾಗಿದ್ದಾರೆ.
ಕೊರೊನಾ ಎಂದರೆ ಭಯ ಹುಟ್ಟಿಸುವ ವಾತಾವರಣವೇ ನಮ್ಮ ಸಮಾಜದಲ್ಲಿ ಸೃಷ್ಟಿಯಾಗಿದೆ. ಆದರೆ, ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ನಾವೇ ಹೊಂದಿದ್ದೇವೆ. ಕೋವಿಡ್ -19 ಸೋಂಕಿಗೆ ಒಳಗಾದಾಗ, ಬಳ್ಳಾರಿ ಡೆಂಟಲ್ ಕಾಲೇಜಿಗೆ ನನ್ನನ್ನು ಸ್ಥಳಾಂತರಿಸಲಾಗಿತ್ತು. ಮೊದಲ ಎರಡು ದಿನಗಳ ಕಾಲ ನನಗೆ ಭಯವಿತ್ತು. ಆಗ ನನ್ನಷ್ಟಕ್ಕೇ ನಾನೇ ಆತ್ಮಸ್ಥೈರ್ಯ ತುಂಬಿಕೊಂಡು, ದಿನಾಲೂ ಯೋಗಾಭ್ಯಾಸ ಮಾಡಲು ಶುರು ಮಾಡಿದೆ. ಬಿಸಿನೀರು ಕುಡಿಯುತ್ತಾ ಬಂದೆ. ಅದರಿಂದ ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ಈ ಕೊರೊನಾದಿಂದ ಯಾರೂ ಸಾಯಲ್ಲ. ಅದರಿಂದಾಗುವ ಭಯದಿಂದಲೇ ಈ ಸಾವು-ನೋವು ಸಂಭವಿಸುತ್ತವೆ. ಯಾರೂ ಕೂಡ ಕೊರೊನಾ ಎಂದರೆ ಭಯಪಡಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಗಳ ಕವಚ ಧರಿಸಬೇಕು. ನಿಯಮಿತವಾದ ಯೋಗಾಭ್ಯಾಸ, ಮಿತ ಆಹಾರ ಹಾಗೂ ಆಗಾಗ ಬಿಸಿ ನೀರನ್ನು ಸೇವಿಸಬೇಕೆಂದು ಈ ವಿಡಿಯೋ ಮೂಲಕ ಜನರಿಗೆ ಮಾಹಿತಿ ನೀಡಿ ನೆರವಾಗಿದ್ದಾರೆ.