ಬಳ್ಳಾರಿ :ಚರ್ಚ್ ಪಾಸ್ಟರ್ ಎಂದು ಹೇಳಿಕೊಂಡು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದ ಆರೋಪಿ ರವಿಕುಮಾರ್ ಎಂಬ ವ್ಯಕ್ತಿ ಜೈಲು ಪಾಲಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಕ್ರೈಸ್ತ ಧರ್ಮ ಪ್ರಚಾರದ ಹೆಸರಿನಡಿ ಮಹಿಳೆಯರಿಗೆ ವಂಚನೆ ಹಾಗೂ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆ ರವಿಕುಮಾರ್ ಅವರನ್ನು ಬಳ್ಳಾರಿ ಪೊಲೀಸರು ಇಂದು ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಜೈಲಿಗೆ ಕಳುಹಿಸಿದ್ದಾರೆ.
ಕಳೆದೊಂದು ವಾರದ ಹಿಂದೆಯೇ ಬಳ್ಳಾರಿಯ ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಡಿಸೆಂಬರ್ 24ರಂದು ಬಳ್ಳಾರಿ ಶ್ವೇತಾ ಎಂಬ ಯುವತಿಯ ಪಾಲಕರು ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದ್ರೆ, ಬಳಿಕ ಶ್ವೇತಾ ಸ್ವತಃ ನಾನೇ ರವಿ ಅವರ ಜೊತೆಯಲ್ಲಿ ಬಂದಿರುವೆ. ಮೇಲಾಗಿ, ನಾನು ಅವರೊಂದಿಗೆ ಮದುವೆ ಆಗಿರುವುದಾಗಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಳು.
ಇದನ್ನೂ ಓದಿ: ಅಡುಗೆ ಸಹಾಯಕರ 3 ತಿಂಗಳ ಗೌರವ ಸಂಭಾವನೆ ಬಿಡುಗಡೆ ಮಾಡಿದ ಸರ್ಕಾರ
ಆದಾದ ಬಳಿಕ ಫಾ.ರವಿ ವಿರುದ್ಧ ಮತ್ತೆ ಇಬ್ಬರು ಯುವತಿಯರು ದೂರು ನೀಡಿದ್ದಾರೆ. ಒಬ್ಬಾಕೆ ಧರ್ಮದ ಹೆಸರಲ್ಲಿ ಸುಮಾರು 9 ಲಕ್ಷ ರೂ. ಹಣ ದೋಚಿದ್ದಾರೆ ಎಂದು, ಮತ್ತೊಬ್ಬಾಕೆ ಅತ್ಯಾಚಾರ ನಡೆಸಿರುವ ಆರೋಪದ ಅಡಿಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆ ಆರೋಪಿ ರವಿ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿತ್ತು.
ಎಫ್ಐಆರ್ ದಾಖಲಾಗುತ್ತಿದ್ದಂತೆ ಪೊಲೀರು ಫಾ.ರವಿಕುಮಾರ ಹುಡುಕಾಟಕ್ಕೆ ಬಲೆ ಬೀಸಿದ್ದರು. ಶ್ವೇತಾ ಎಂಬ ಯುವತಿಯ ಸ್ನೇಹಿತರ ಬೆಂಗಳೂರಿನ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಿ ಬಳ್ಳಾರಿಗೆ ಕರೆತರಲಾಗಿತ್ತು.
ಕೋರ್ಟ್‌ಗೆ ಹಾಜರು ಪಡಿಸುವ ವೇಳೆ ಛೀಮಾರಿ!
ಇಂದು ಆರೋಪಿಯನ್ನು ಕೋರ್ಟ್‌ಗೆ ಹಾಜರು ಪಡಿಸುವ ವೇಳೆ ಶ್ವೇತಾ ಮನೆಯವರು ಹಾಗೂ ಮಹಿಳಾ ಸಂಘಟನೆಯ ಕೆಲ ಮಹಿಳೆಯರು ಫಾಸ್ಟರ್ ರವಿಗೆ ಛೀಮಾರಿ ಹಾಕಿದ್ದಾರೆ. ಮಹಿಳೆಯೊಬ್ಬರು ತನ್ನ ಕೈಯಲ್ಲಿದ್ದ ಮೊಬೈಲ್‌ನ ಆತನ ತಲೆಗೆ ಎಸೆದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ರವಿಯನ್ನ ರಕ್ಷಿಸಿ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.