ಬಳ್ಳಾರಿ: ಗಣಿನಾಡು ಜಿಲ್ಲೆಯ ಎತ್ತಿನಬೂದಿಹಾಳು ಗ್ರಾಮದ ಹೊರವಲಯದಲ್ಲಿ ಕಬ್ಬು ಬೆಳೆಯ ಮಧ್ಯೆ ಅಂದಾಜು ಕಾಲು ಎಕರೆಯಲ್ಲಿ ಬೆಳೆದ ಗಾಂಜಾ ಗಿಡಗಳನ್ನು ಬಳ್ಳಾರಿ ಉಪ ವಿಭಾಗಾಧಿಕಾರಿಗಳ ತಂಡ, ಗಾಂಜಾ ಗಿಡಗಳ ಸಮೇತ ಅದನ್ನು ಬೆಳೆದ ರೈತನೋರ್ವನನ್ನು ಬಂಧಿಸಿದೆ.
ಬಳ್ಳಾರಿ ತಾಲೂಕಿನ ಬುರ್ರನಾಯಕನಹಳ್ಳಿ ಗ್ರಾಮದ ಅಲ್ಲಣ್ಣ ಎಂಬಾತನನ್ನು ಅಬಕಾರಿ ಉಪ ವಿಭಾಗಾಧಿಕಾರಿ ಕೆ.ಮೋತಿಲಾಲ್ ನೇತೃತ್ವದ ಸಿಬ್ಬಂದಿ ಬಂಧಿಸಿದ್ದಲ್ಲದೆ, ಲಕ್ಷಾಂತರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಕಬ್ಬಿನ ಗದ್ದೆ ಮಧ್ಯದಲ್ಲಿ ಗಾಂಜಾ ಬೆಳೆ ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಸಿದ್ದೇಶ್ವರ ಪುತ್ರ ಕೆ.ಅಜಯ ಕುಮಾರ ಎಂಬುವವರಿಗೆ ಸೇರಿದ್ದ ಈ ಐದು ಎಕರೆಗೂ ಅಧಿಕ ಹೊಲವನ್ನು ಗುತ್ತಿಗೆ ಪಡೆದುಕೊಂಡಿದ್ದ ಅಲ್ಲಣ್ಣ ಎಂಬುವರು, ಕಬ್ಬು ಬೆಳೆಯನ್ನು ಸುತ್ತಲೂ ಬೆಳೆದು ಅದರ ನಡುವೆ ಕಾಲು ಎಕರೆ ಪ್ರದೇಶದಲ್ಲಿ ಅಂದಾಜು 450ಕ್ಕೂ ಹೆಚ್ಚು ಗಿಡಗಳನ್ನು ಬೆಳೆದಿದ್ದಾರೆ. ಸುಮಾರು 4 ಟನ್ಗಳಷ್ಟು ಗಾಂಜಾ ಬೆಳೆಯನ್ನು ಬೆಳೆಯಲಾಗಿದೆ. ಈ ವಿಷಯ ತಿಳಿದ ಜಿಲ್ಲಾ ಅಬಕಾರಿ ಉಪ ವಿಭಾಗಾಧಿಕಾರಿ ಕೆ.ಮೋತಿಲಾಲ್ ಹಾಗೂ ಜಿಲ್ಲಾ ವಿಚಕ್ಷಣ ದಳದ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ನಡೆಸಿ, ಗಾಂಜಾ ಗಿಡಗಳನ್ನು ಬೇರು ಸಮೇತ ಕೀಳುವ ಮುಖೇನ ನಾಶಪಡಿಸಿದ್ದಾರೆ.
ಉಪ ಕಾಲುವೆಗೆ ನೀರು ಬಿಟ್ಟಾಗ ಬಿತ್ತಿದ್ದೆ: ಜಿಲ್ಲೆಯ ತುಂಗಭದ್ರಾ ಜಲಾಶಯದಿಂದ ಉಪ ಕಾಲುವೆಗೆ ನೀರು ಹರಿಬಿಟ್ಟಾಗ ಈ ಗಾಂಜಾ ಗಿಡಗಳನ್ನು ಬೆಳೆದಿದ್ದು, ಈ ಬಾರಿ ಮಾತ್ರವೇ ಗಾಂಜಾ ಬೆಳೆ ಬೆಳೆದಿರುವೆ ಎಂದು ಕಬ್ಬು ಬೆಳೆಗಾರ ಅಲ್ಲಣ್ಣ ಹೇಳಿದ್ದಾರೆ. ಈ ಹಿಂದೆ ಈತನ ತಂದೆ ಹನುಮಪ್ಪ ಎಂಬುವವರ ಮೇಲೂ ಗಾಂಜಾ ಬೆಳೆದ ಪ್ರಕರಣ ದಾಖಲಾಗಿದ್ದವು.