ಬಳ್ಳಾರಿ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ನಿನ್ನೆ (ಡಿ. 11ರಂದು) ತಾಲೂಕಿನ ಗಡಿಯಂಚಿನ ಗ್ರಾಮ ಚೆಳ್ಳಗುರ್ಕಿ ಗ್ರಾಮ ಪಂಚಾಯಿತಿಯ ಜೋಳದರಾಶಿ ಗ್ರಾಮದಲ್ಲಿ ಕಾರುಬಾರು ಬಲು ಜೋರಿತ್ತು.
ಜೋಳದರಾಶಿ ಗ್ರಾಮದ ಸದಸ್ಯ ಸ್ಥಾನಗಳಿಗೆ ಒಂದೇ ಕುಟುಂಬದ ನಾಲ್ವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 10ಕ್ಕೂ ಹೆಚ್ಚು ಕಾರುಗಳ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ. ಇವರೆಲ್ಲರೂ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಆಪ್ತರು ಎಂದು ಹೇಳಲಾಗುತ್ತಿದೆ.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಜೋಳದರಾಶಿ ಗ್ರಾಮದಲ್ಲಿ 12 ಸದಸ್ಯ ಸ್ಥಾನಗಳಿದ್ದು, ಎರಡು ಸಾಮಾನ್ಯ ವರ್ಗ, ತಲಾ ನಾಲ್ಕು ಎಸ್ಟಿ/ಎಸ್ಸಿ ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಗ್ರಾಪಂ ಸದಸ್ಯ ಸ್ಥಾನದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಬಿ.ಲಾವಣ್ಯ (ಸಾಮಾನ್ಯ ಮಹಿಳೆ), ತಿಕ್ಕಣ್ಣ ಮತ್ತು ರಮೇಶ (ಎಸ್ಟಿ), ಬಿ.ತಿಮ್ಮಕ್ಕ (ಎಸ್ಟಿ) ನಾಮಪತ್ರ ಸಲ್ಲಿಸಿದ್ದಾರೆ.
ಅಭ್ಯರ್ಥಿಗಳು 10 ಕಾರುಗಳ ಮೂಲಕ ಬಂದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಗ್ರಾಪಂ ಸದಸ್ಯನಾಗಲು ಹಣಕಾಸಿನ ವ್ಯವಹಾರ ಇದ್ದರೆ ಸಾಕು ಎಂಬುದನ್ನು ಇದು ಸೂಚಿಸುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಜಿಲ್ಲೆಯ ಕುರುಗೋಡು ತಾಲೂಕಿನ ಬೈಲೂರಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು ಪ್ರಕ್ರಿಯೆ ನಡೆದಿದ್ದು, ಭಾರಿ ಮೊತ್ತದ ಹಣವನ್ನು ಸಂಗ್ರಹಿಸಿ ಸದಸ್ಯತ್ವವನ್ನೇ ಬಿಕರಿ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದು ರಾಜ್ಯದ ಗಮನ ಸೆಳೆದಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಯಾರೊಬ್ಬರೂ ಪಾಲಿಸಿರಲಿಲ್ಲ. ಜನಜಂಗುಳಿ ಸೇರಿದರೆ ಮತ್ತು ಅದಕ್ಕೆ ಅವಕಾಶ ನೀಡಿದವರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.