ಬಳ್ಳಾರಿ:ಕನ್ಯಾಕುಮಾರಿಯಿಂದ ಆರಂಭಗೊಂಡು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿದ್ದು, ನಾಳೆ (ಅ.15ರಂದು) ಬಳ್ಳಾರಿ ನಗರ ಪ್ರವೇಶಿಸಲಿದ್ದು, ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ.
ಬಹಿರಂಗ ಸಭೆಗೆ ಸಂಬಂಧಿಸಿದಂತೆ ಈಗಾಗಲೇ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದ್ದು, ಮುನಿಸಿಪಲ್ ಮೈದಾನದಲ್ಲಿ ಬೃಹತ್ ವೇದಿಕೆ
ಹಾಗೂ ಪೆಂಡಾಲ್ ಹಾಕಲಾಗಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ಶನಿವಾರ ನಡೆಯಲಿರುವ ಸಮಾವೇಶದಲ್ಲಿ 3 ರಿಂದ 5 ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಬಳ್ಳಾರಿ ಜಿಲ್ಲೆಗೆ ರಾಹುಲ್ ಗಾಂಧಿ ಆಗಮನ ಹಿನ್ನೆಲೆ ಪೂರ್ಣಕುಂಭ ಹೊತ್ತ 108 ಮಹಿಳೆಯರಿಂದ ಅದ್ದೂರಿ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ತಿಳಿಸಿದ್ದಾರೆ.
ಬಹಿರಂಗ ಸಮಾವೇಶದಲ್ಲಿ ಭಾಗವಹಿಸುವ ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು, ಪಾದಯಾತ್ರಿಗಳು ಹಾಗೂ ಮುಖಂಡರಿಗೆ ಊಟದ ವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ ಶಾಸಕ ನಾಗೇಂದ್ರ ಅವರು, ವೈಯಕ್ತಿಕವಾಗಿ ಒಂದೂವರೆ ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಅಲ್ಲಂ ಭವನದ ಬಳಿ ಊಟವನ್ನು ತಯಾರು ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ಸಂಜೆ ಹಲಗುಂದಿಗೆ ಪ್ರವೇಶಿಲಿರುವ ಯಾತ್ರೆ: ಇಂದು ಸಂಜೆ ಬಳ್ಳಾರಿ ಜಿಲ್ಲೆಯ ಹಲಕುಂದಿಗೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಲಿದ್ದು, ಹಲಕುಂದಿ ಮಠದಲ್ಲಿ ಇಂದು ರಾಗಾ (ಅ.14) ವಾಸ್ತವ್ಯ ಹೂಡಲಿದ್ದಾರೆ. ಅ.15ರಂದು ಬೆಳಗ್ಗೆ 6.30ಕ್ಕೆ ಹಲಕುಂದಿಯಿಂದ ಪಾದಯಾತ್ರೆ ಆರಂಭವಾಗಿ ಬಳ್ಳಾರಿಗೆ ಆಗಮಿಸಲಿದೆ.
ಬೆಳಗ್ಗೆ 11 ಗಂಟೆಗೆ ಕಮ್ಮಾಭವನದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1.30ಕ್ಕೆ ಬಳ್ಳಾರಿ ಮುನ್ಸಿಪಾಲ್ ಕಾಲೇಜ್ ಮೈದಾನದಲ್ಲಿ ರಾಗಾ ಸಮಾವೇಶಕ್ಕೆ ತೆರಳಲಿದ್ದು 3 ಗಂಟೆಯವರೆಗೆ ಸಮಾವೇಶ ಪೂರ್ಣಗೊಳ್ಳಲಿದೆ. ನಂತರದಲ್ಲಿ ಸಂಗನಕಲ್ ಗ್ರಾಮಕ್ಕೆ ತೆರಳಿ ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.