ಬಳ್ಳಾರಿ:ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಬೆಳಿಗ್ಗೆ 10 ಗಂಟೆಯಿಂದ ಮತದಾನ ಆರಂಭವಾಗಿದೆ. ಹೀಗಾಗಿ ಇಂದು ಭಾರತ್ ಜೋಡೋ ಯಾತ್ರೆಗೆ ತಾತ್ಕಾಲಿಕವಾಗಿ ವಿರಾಮ ನೀಡಲಾಗಿದೆ.
ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಳ್ಳಾರಿಯ ಸಂಗನಕಲ್ಲು ಗ್ರಾಮ ಬಳಿಯೇ ವಾಸ್ತವ್ಯ ಹೂಡಿದ್ದು, ಅಲ್ಲಿಂದಲೇ ಮತದಾನ ಮಾಡಲಿದ್ದಾರೆ. ಮತದಾನ ಬೇಕಾಗುವ ಎಲ್ಲ ವ್ಯವಸ್ಥೆ ಈಗಾಗಲೇ ಕಲ್ಪಿಸಲಾಗಿದೆ.
ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ಬಳಿ ಇಂದು ಮತ್ತು ನಾಳೆ ವಾಸ್ತವ್ಯ ಹೂಡಿರುವ ರಾಹುಲ್ ಗಾಂಧಿ, ಎಐಸಿಸಿ ಹಾಗೂ ಕೆಪಿಸಿಸಿಯ ಸುಮಾರು 45 ಸದಸ್ಯರು ಅಲ್ಲೇ ಮತದಾನ ಹಕ್ಕು ಚಲಾಯಿಸಲಿದ್ದಾರೆ. ಪಾದಯಾತ್ರೆಗೆ ಬಳಸುವ ರೂಮ್ ಕಂಟೇನರ್ ಅನ್ನು ಮತಗಟ್ಟೆಯಾಗಿ ಬದಲಾಯಿಸಿದ್ದು, ರಾಹುಲ್ ಗಾಂಧಿ ಸೇರಿ 45 ಸದಸ್ಯರು ಇಲ್ಲಿಂದಲೇ ಹಕ್ಕು ಚಲಾಯಿಸಲಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಕಣದಲ್ಲಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪೈಪೊಟಿ ನಡೆಸುತ್ತಿದ್ದಾರೆ.
ಓದಿ:137 ವರ್ಷಗಳ ಕಾಂಗ್ರೆಸ್ ಇತಿಹಾಸದಲ್ಲಿ ಆರನೇ ಅಧ್ಯಕ್ಷೀಯ ಚುನಾವಣೆ: ಇಂದು ಮತದಾನ