ಬಳ್ಳಾರಿ: ಸರ್ಕಾರಿ ಶಾಲೆಯ ಶಿಕ್ಷಕರೆಂದರೆ ಸಾಕು. ಉತ್ತಮ ಸಂಭಾವನೆ ಬರುತ್ತೆ. ಅವರಿಗೆ ಜೀವನ ಭದ್ರತೆಯೂ ಇರುತ್ತೆ. ತಾವೇನು? ತಮ್ಮ ಮನೆಯೇನು? ಎಂಬ ಚೌಕಟ್ಟಿನೊಳಗೆ ಜೀವನ ಸಾಗಿಸುವ ಅದೆಷ್ಟೋ ಶಿಕ್ಷಕರಿಗೆ ಗಣಿನಗರಿಯ ಶಿಕ್ಷಕರೊಬ್ಬರು ಮಾದರಿಯಾಗಿದ್ದಾರೆ.
ಹೌದು, ಬಳ್ಳಾರಿಯ ಜಾಗೃತಿ ನಗರದ ವ್ಯಾಪ್ತಿಯಲ್ಲಿ ಬರುವ ಬಸಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿರುವ ಎಚ್.ಎಂ.ವಿರುಪಾಕ್ಷಯ್ಯನವರು ಜಿಲ್ಲೆಯ ಸ್ಲಂಗಳಲ್ಲಿ ಪೋಷಕರಿಲ್ಲದೇ ಅನಾಥರಾಗಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕಳೆದ ದಶಕದಿಂದಲೂ ಶತಾಯ- ಗತಾಯ ಪ್ರಯತ್ನ ನಡೆಸಿದ್ದಾರೆ. ಅದರಲ್ಲೇ ಯಶಸ್ಸು ಕಂಡಿದ್ದಾರೆ.
ಈವರೆಗೂ ಅಂದಾಜು 480 ಕ್ಕೂ ಅಧಿಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಅವರಿಗೆ ಸಕಾಲದಲ್ಲಿ ಪಾಠೋಪಕರಣ ನೀಡೋ ಮುಖೇನ ಸ್ಲಂ ಮಕ್ಕಳ ಶೈಕ್ಷಣಿಕವಾಗಿ ಸಬಲರಾಗಲು ಶ್ರಮಿಸುತ್ತಿದ್ದಾರೆ.
ದೈಹಿಕ ಶಿಕ್ಷಕ ಹೆಚ್.ಎಂ.ವಿರುಪಾಕ್ಷಯ್ಯ ಒಂಭತ್ತು ವರ್ಷಗಳಿಂದ ಹಿಂದೆ ಬಳ್ಳಾರಿಯ ಈದ್ಗಾ ಮೈದಾನ ಬಳಿಯಿರುವ ಸ್ಲಂ ನಿವಾಸಿಗಳ ಪ್ರದೇಶದಿಂದ ಅಶೋಕ - ನವೀನ್ ಎಂಬ ಇಬ್ಬರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಆಗಮಿಸುತ್ತಿದ್ದರು. ಅದೇ ವೇಳೆ ದೈಹಿಕ ಶಿಕ್ಷಕರಾದ ಎಚ್.ಎಂ.ವಿರುಪಾಕ್ಷಯ್ಯ ಅವರು, ಸ್ಲಂ ಪ್ರದೇಶದಿಂದ ಬರುವ ಆ ಇಬ್ಬರು ಮಕ್ಕಳು ಸದಾ ಶಾಲೆಗೆ ಲೇಟಾಗಿಯೇ ಬರುತ್ತಿದ್ದರು. ಯಾಕೆ ದಿನಾಲೂ ತಡವಾಗಿ ಬರುತ್ತೀರಾ ಎಂದು ಗದರಿದ್ದಾರೆ ಆಗ ಅವರಿಬ್ಬರೂ ಕೂಡ ಒಬ್ಬರ ಮುಖ ಒಬ್ಬರು ನೋಡುತ್ತಲೇ ಅಳಲಾರಂಭಿಸಿದ್ರು. ಆಯಿತು, ಕ್ಲಾಸ್ ಗೆ ಹೋಗಿ ಎಂದು, ಶಾಲೆ ಬಿಟ್ಟ ನಂತರ ಅವರನ್ನ ಹಿಂಬಾಲಿಸಿದ ಈ ದೈಹಿಕ ಶಿಕ್ಷಕ ವಿರುಪಾಕ್ಷಯ್ಯ, ಅವರಿಬ್ಬರ ಮನೆಯ ಪರಿಸ್ಥಿತಿ ನೋಡಿ ದಂಗಾಗಿದ್ದಾರೆ.
ಮನೆಯೊಳಗೆ ತಾಯಿ ಹೆಚ್ಐವಿ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾಳೆ. ತಂದೆ ಕೂಡ ಹೆಚ್ಐವಿ ಸೋಂಕಿಗೆ ಗುರಿಯಾಗಿ ಹಾಸಿಗೆ ಹಿಡಿದಿದ್ದಾನೆ. ಅಜ್ಜಿ ಮಾತ್ರ ಹುಷಾರಾಗಿದ್ದರು. ಬೆಳ್ಳಂಬೆಳಿಗ್ಗೆ ಹಾಸಿಗೆಯಿಂದಲೇ ಮೇಲೆದ್ದ ತತ್ ಕ್ಷಣವೇ ಇವರಿಬ್ಬರ ಕಾರ್ಯಾರಂಭ ಆಗೋದು ಈ ಭಿಕ್ಷಾಟನೆಯಿಂದಲೇ ಅಂತ ಗೊತ್ತಾಯಿತು. ಅವರಿಬ್ಬರು ಭಿಕ್ಷೆಬೇಡಿ ತಂದಂತಹ ಹಣದಿಂದಲೇ ಅಜ್ಜಿ ಮತ್ತು ತಂದೆಗೆ ಊಟ. ಇಲ್ಲಾಂದ್ರೆ ಇಲ್ಲ. ಅಂತಹ ಕೆಟ್ಟ ಪರಿಸ್ಥಿತಿಯನ್ನ ನಾನು ನೋಡಿ ಒಂದ್ ಕ್ಷಣ ಗದ್ಗರಿತನಾದೆ. ನಮ್ಮ ಹುಡುಗರನ್ನು ಬಡಿ ಬ್ಯಾಡಪ್ಪ ಅಂತ ಆ ಅಜ್ಜಿಯ ಕಳಕಳಿಯ ಮನವಿ ಇಂದಿಗೂ ನನಗೆ ಕಣ್ ಕಟ್ಟುತ್ತಿದೆ. ಅದನ್ನ ನೋಡಿಯೇ ನಾನು ಈ ನಿರ್ಧಾರಕ್ಕೆ ಬಂದೆ. ಹೀಗಾಗಿ, ಅವರಿಬ್ಬರನ್ನ ಬಾಲಕರ ಬಾಲ ಮಂದಿರಕ್ಕೆ ಸೇರಿಸಿದೆ. ಆಗ ನನಗೆ ತೋಚಿದ್ದು ಈ ಕರ್ನಾಟಕ ರಾಜ್ಯ ಸ್ಲಂ ಮಕ್ಕಳ ಶೈಕ್ಷಣಿಕ ಪ್ರಗತಿಯ ಚಿಂತನಾ ಸಂಸ್ಥೆಯೊಂದನ್ನ ಸಂಸ್ಥಾಪಿಸೋದು. ಸ್ಲಂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರೋದು ನನಗೆ ವೈಯಕ್ತಿಕವಾಗಿ ನನಗೆ ಖುಷಿ ತಂದಿದೆ ಎಂದು ದೈಹಿಕ ಶಿಕ್ಷಕ ಹೆಚ್.ಎಂ.ವಿರುಪಾಕ್ಷಯ್ಯ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಅನಾಥರಿಗೆ ಸಂಸ್ಕಾರ ಆಶ್ರಮ:ಜಿಲ್ಲೆಯಲ್ಲಿ ಪೋಷಕರಿಲ್ಲದೇ ಅನಾಥರಾಗಿರೊ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡೋ ಮುಖೇನ ಶೈಕ್ಷಣಿಕ ಪ್ರಗತಿಗೂ ಮುಂದಾಗಿದ್ದಾರೆ. ಈ ಶೈಕ್ಷಣಿಕ ಸಾಲಿನಲ್ಲಿ ಅಂದಾಜು 12 ಮಕ್ಕಳು ನೋಂದಾಯಿಸಿಕೊಂಡಿದ್ದಾರೆ. ಇನ್ನೂ 18 ಮಂದಿಗೆ ಈ ಸಂಸ್ಕಾರ ಅನಾಥಾಶ್ರಮದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.