ಬಳ್ಳಾರಿ:ರಾಜ್ಯದಲ್ಲಿಯೇ ದೊಡ್ಡ ಜೈವಿಕ ಉದ್ಯಾನವನವಾದ ಜಿಲ್ಲೆಯ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣ ಎರಡು ಸಿಂಹ ಮತ್ತು ನಾಲ್ಕು ಹುಲಿಗಳನ್ನು ತರಲಾಗಿದ್ದು, ಈ ನಿಟ್ಟಿನಲ್ಲಿ ಪ್ರಾಣಿ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಿಂಹ ಸಫಾರಿಗೆ ತಯಾರಿ ನಡೆದಿದೆ.ಉದ್ಯಾನವನದಲ್ಲಿಎರಡು ಸಿಂಹ, ನಾಲ್ಕು ಹುಲಿ, 200 ಜಿಂಕೆಗಳು ಓಡಾಡಿಕೊಂಡಿದ್ದು ಇವುಗಳನ್ನು ನೋಡಲೆಂದೇ ದಿನನಿತ್ಯ ಸಾವಿರಾರು ಜನರು ಪಾರ್ಕ್ಗೆ ಬರುತ್ತಿದ್ದಾರೆ.
ಸಿಂಹ ಸಫಾರಿಗಾಗಿ 30 ಹೆಕ್ಟೇರ್ ಪ್ರದೇಶ ಮೀಸಲಿರಿಸಲಾಗಿದೆ. ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಫೆ. 21ರಂದು ಪೃಥ್ವಿ ಮತ್ತು ರಮ್ಯಾ ಹೆಸರಿನ ಎರಡು ಹುಲಿಗಳನ್ನು ಈ ಉದ್ಯಾನಕ್ಕೆ ತಂದಿದ್ದು, ಇದೀಗ ವಾತಾವರಣಕ್ಕೆ ಹೊಂದಿಕೊಳ್ಳಲಿವೆಯೇ ಎನ್ನುವುದಕ್ಕೆ ನಿಗಾವಹಿಸಲಾಗುತ್ತಿದೆ. ಅಲ್ಲದೆ ಬನ್ನೇರುಘಟ್ಟ ಅಭಯಾರಣ್ಯದಿಂದ ಎರಡು ಗಂಡು ಮತ್ತು ಎರಡು ಹೆಣ್ಣು ಹುಲಿ ಸೇರಿದಂತೆ ಒಟ್ಟು 4 ಹುಲಿಗಳು ಬಂದಿದ್ದು, ಅವುಗಳು ಸಹ ಸಫಾರಿಗೆ ರೆಡಿಯಾಗಿವೆ. ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಆರಂಭದಲ್ಲಿ ಜಿಂಕೆಗಳ ಸಫಾರಿ ಆಗಿತ್ತು. ಇದೀಗ ಹುಲಿಗಳ ಆಗಮನ, ತದನಂತರ ಸಿಂಹಗಳ ಸಫಾರಿ ನಡೆಯಲಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಒಬ್ಬರಿಗೆ 50 ರೂ.:
ಉದ್ಯಾನದಲ್ಲಿ ಸಫಾರಿ ತೆರಳುವ ಪ್ರಾಣಿ ಪ್ರಿಯರಿಗೆ ತಲಾ 50 ರೂ. ಪಡೆದು ಅರಣ್ಯ ಇಲಾಖೆ ವಾಹನದಲ್ಲಿಯೇ ಸುತ್ತಾಡಿಸುವ ವ್ಯವಸ್ಥೆ ಇದೆ. ಉದ್ಯಾನದಲ್ಲಿ ಸಿಂಹಗಳ ವಾಸಕ್ಕೆ ಮನೆ ನಿರ್ಮಿಸಲಾಗಿದೆ. ಸಫಾರಿಯ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಅಲ್ಲಲ್ಲಿ ಕೆರೆಗಳನ್ನ ನಿರ್ಮಿಸಲಾಗಿದೆ. ಉದ್ಯಾನದಲ್ಲಿನ ಪ್ರಾಣಿಗಳು, ಕಚೇರಿಯ ಬಳಕೆ, ಗಿಡ-ಮರಗಳಿಗೆ ನೀರಿನ ವ್ಯವಸ್ಥೆಗಾಗಿ ಕಮಲಾಪುರ ಬಳಿಯ ಎಲ್ಎಲ್ಸಿಯಿಂದ 2.5 ಕ್ಯೂಸೆಕ್ ನೀರು ಪಡೆಯುವುದಕ್ಕೆ ಯೋಜನೆಯೂ ಸಿದ್ಧವಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.