ಬಳ್ಳಾರಿ : ಮಂಗಳೂರಿನಲ್ಲಿ ನಡೆದಿರುವ ಆಟೋ ರಿಕ್ಷಾ ಸ್ಫೋಟ ಪ್ರಕರಣ ಭಯೋತ್ಪಾದಕ ಕೃತ್ಯ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇದರ ಹಿಂದೆ ಇರುವ ಜಾಲವನ್ನು ಬಯಲಿಗೆಳೆಯುವ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಳ್ಳಾರಿ ಸಮಾವೇಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮಂಗಳೂರು ಸ್ಫೋಟ ಪ್ರಕರಣ ಸಂಪೂರ್ಣ ತನಿಖೆ ಮಾಡಲಾಗುವುದು. ಮೇಲ್ನೋಟಕ್ಕೆ ಭಯೋತ್ಪಾದಕ ಕೃತ್ಯ ಎಂದು ತಿಳಿದು ಬಂದಿದೆ. ಅಲ್ಲಿ ಸಿಕ್ಕಿರುವ ಆಧಾರ್ ಕಾರ್ಡ್ ಸಹ ನಕಲಿ ಎಂಬುದು ಬೆಳಕಿಗೆ ಬಂದಿದೆ ಎಂದರು.
ಪ್ರಾಥಮಿಕ ತನಿಖೆಯಲ್ಲಿ ಭಯೋತ್ಪಾದಕ ಕೃತ್ಯ ಎಂದು ತಿಳಿದು ಬಂದಿದೆ ನಕಲಿ ದಾಖಲೆ ಬಳಸಿದವನ ಮೂಲ ಹುಡುಕಿದಾಗ ಭಯೋತ್ಪಾದಕ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಎನ್ಐಎ ಮತ್ತು ರಾಜ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ದಾಳಿ ಮಾಡಿದವನಿಗೆ ಪ್ರಜ್ಞೆ ಬಂದ ನಂತರ ಸಂಪೂರ್ಣ ಮಾಹಿತಿ ಕಲೆಹಾಕಲಾಗುತ್ತದೆ. ಈಗ ಅವನ ಓಡಾಟದ ಹಿನ್ನೆಲೆಯನ್ನು ಆಧರಿಸಿ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ :ಪೊಲೀಸ್ ವಿಚಾರಣೆ ಎದುರಿಸಿದ ಹುಬ್ಬಳ್ಳಿಯ ಪ್ರೇಮ್ರಾಜ್.. ಮಂಗಳೂರಲ್ಲಿ ಸಿಕ್ಕಿರುವ ಆಧಾರ್ ಕಾರ್ಡ್ ಬಗ್ಗೆ ಸ್ಪಷ್ಟನೆ