ಬಳ್ಳಾರಿ :ಗಣಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣೆಯ ಪಿಎಸ್ಐ ಮಾಡಿದ ಒಂದು ಎಡವಟ್ಟಿಗೆ ಇಡೀ ಕಂಪ್ಲಿ ಪಟ್ಟಣದ ಪೊಲೀಸ್ ಠಾಣೆಯನ್ನೇ ಸೀಲ್ಡೌನ್ ಮಾಡೋ ಹಂತ ತಲುಪಿದೆ.
ಕಂಪ್ಲಿ ಪೊಲೀಸ್ ಠಾಣೆಯ ಪಿಎಸ್ಐ ಮೌನೇಶ ರಾಥೋಡ್ ಅವರು, ತಮಗೆ ಗಂಡು ಮಗು ಹುಟ್ಟಿದೆ ಎಂಬ ಸಂತಸದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಸಂಬಂಧಿಕರಿಗೆ ಹಾಗೂ ಹಿತೈಷಿಗಳಿಗೆ ಪಾರ್ಟಿ ಕೊಟ್ಟಿದ್ದರು. ಆ ಪಾರ್ಟಿಯಲ್ಲಿ ಕೊರೊನಾ ಸೋಂಕಿತರೊಬ್ಬರು ಭಾಗಿಯಾಗಿದ್ದರು.
ಜೂನ್ 19ರಂದು ಕಂಪ್ಲಿ ಪಟ್ಟಣದ ಹೊರವಲಯದಲ್ಲಿರುವ ಸಮುದಾಯ ಭವನದಲ್ಲಿ ಈ ಪಾರ್ಟಿಯನ್ನ ಮೌನೇಶ್ ರಾಥೋಡ್ ಆಯೋಜಿಸಿದ್ದರು. ಆ ಪಾರ್ಟಿಯಲ್ಲಿ 50ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಆದರೆ, ಈ ಪಾರ್ಟಿಗೂ ಮನ್ನವೇ ಕಂಪ್ಲಿ ಠಾಣೆಯ ಪೊಲೀಸ್ ಪೇದೆಗೆ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಆ ಸೋಂಕಿತನೂ ಕೂಡ ಭಾಗಿಯಾಗಿದ್ದು, ಕಂಪ್ಲಿ ಸಿಪಿಐಡಿ ಹುಲುಗಪ್ಪ ಕೂಡ ಈ ಪಾರ್ಟಿಯಲ್ಲಿದ್ದರು.
ಕಂಪ್ಲಿ ಪೊಲೀಸ್ ಠಾಣೆ ಸೀಲ್ಡೌನ್.. ಪಿಎಸ್ಐ ಮೌನೇಶ್ ರಾಥೋಡ್, ಬಸಪ್ಪ ಲಮಾಣಿ ಹಾಗೂ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿ 50ಕ್ಕೂ ಹೆಚ್ಚು ಮಂದಿಯನ್ನ ಈಗ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ಪೇದೆಯು ಜೂನ್ 20ರಂದು ರಾತ್ರಿ ತಾಲೂಕಿನ ಚಿನ್ನಾಪುರ ಗ್ರಾಮದ ಕಂಟೇನ್ಮೆಂಟ್ ಪ್ರದೇಶ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಜೂನ್ 21ರಂದು ಪಟ್ಟಣದಲ್ಲಿ ರಾತ್ರಿ ಬೀಟ್ನಲ್ಲಿಯೂ ಕೆಲಸ ಮಾಡಿದ್ದರು.
ಜೂನ್ 22 ರಿಂದ 25ರವರೆಗೆ ರಜೆ ತೆಗೆದುಕೊಂಡು ಹಗರಿಬೊಮ್ಮನಹಳ್ಳಿ ಬಳಿಯ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರು. 23ರಂದು ಹಗರಿಬೊಮ್ಮನಹಳ್ಳಿ ಫೀವರ್ ಕ್ಲಿನಿಕ್ನಲ್ಲಿ ಅನಾರೋಗ್ಯದ ಕಾರಣದಿಂದ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. 25ರ ವರದಿಯಲ್ಲಿ ಅವರಿಗೆ ಸೋಂಕಿರುವುದು ದೃಢಪಟ್ಟಿದೆ. ಅವರನ್ನು ತೋರಣಗಲ್ಲಿನ ಜಿಂದಾಲ್ ಸಂಜೀವಿನಿ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.