ಬಳ್ಳಾರಿ : ಜಿಲ್ಲೆಯ ಕುರುಗೋಡು ರಾಘವಾಂಕ ಮಠಕ್ಕೆ ಹಾಲಿ ಪಟ್ಟಾಧಿಕಾರಿ ಇರುವಾಗಲೇ ರಾತ್ರೋರಾತ್ರಿ ಮತ್ತೋರ್ವ ಪಟ್ಟಾಧಿಕಾರಿಯ ಪಟ್ಟಾಭಿಷೇಕ ಮಾಡಿರೋದು ತಡವಾಗಿ ಬೆಳಕಿಗೆ ಬಂದಿದೆ.
ವೀರಶೈವ ಸಮುದಾಯದ ಪಂಚ ಪೀಠಗಳಲ್ಲೊಂದಾದ ಉಜ್ಜಯಿನಿ-ಶ್ರೀಶೈಲ ಪೀಠದ ಹಾಲಿ ಜಗದ್ಗುರುಗಳ ಮಾರ್ಗದರ್ಶನದ ಮೇರೆಗೆ ರಾತ್ರೋರಾತ್ರಿ ಕುರುಗೋಡಿನ ರಾಘವಾಂಕ ಮಠಕ್ಕೆ ಬಂದು, ಶಹಾಪೂರಿನ ಸೂಗೂರೇಶ್ವರ ಶಿವಾಚಾರ್ಯ ಸ್ವಾಮೀಜಿಯವರನ್ನ ನೂತನ ಪಟ್ಟಾಧಿಕಾರಿ ಆಗಿ ನೇಮಕ ಮಾಡಿರೋದು ಭಾರೀ ವಿವಾದಕ್ಕೆ ಕಾರಣವಾಗಿದ್ದಲ್ಲದೇ, ಅವರ ಪಟ್ಟಾಭಿಷೇಕ ಮಹೋತ್ಸವವನ್ನೂ ಕೂಡ ನಡೆಸಲಾಗಿದೆ.
ರಾಘವಾಂಕ ಮಠಕ್ಕೆ ಹಾಲಿ ಪಟ್ಟಾಧಿಕಾರಿ ರಾತ್ರೋರಾತ್ರಿ ಮತ್ತೋಬ್ಬ ಪಟ್ಟಾಧಿಕಾರಿ ನೇಮಕ ದಿಢೀರನೇ ನೂತನ ಪಟ್ಟಾಧಿಕಾರಿ ನೇಮಕ ಹಾಗೂ ಮಠದ ಆಸ್ತಿ ವಿವಾದ ಕುರಿತಾಗಿ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಇರೋದರಿಂದಲೇ ಈ ನೆಲದ ಕಾನೂನನ್ನ ಶ್ರೀಶೈಲ-ಉಜ್ಜಯಿನಿ ಪೀಠದ ಜಗದ್ಗುರುಗಳು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆಂಬ ದೂರು ಕೂಡ ಇದೀಗ ಕೇಳಿ ಬಂದಿವೆ.
ಈ ಸಂಬಂಧ ಈ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಘವಾಂಕ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರು, 2009ನೇ ಇಸವಿಯಲ್ಲಿ ನನ್ನನ್ನ ರಾಘವಾಂಕ ಮಠಕ್ಕೆ ಶ್ರೀಶೈಲ ಹಾಗೂ ಉಜ್ಜಯಿನಿ ಜಗದ್ಗುರು ಸಮಕ್ಷಮದಲ್ಲಿ ಪಟ್ಟಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.
ಮೇ 2021ನೇ ಇಸವಿಯಲ್ಲಿ ಗುರುಗಳಾದ ರಾಘವಾಂಕ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗುತ್ತಾರೆ. ಈ ಮಠದ ಗುರುಗಳು ಲಿಂಗೈಕ್ಯರಾದ ಬಳಿಕ ಮಠದ ಮೇಲೆ ನನ್ನದೇ ಹಕ್ಕು ಇರುತ್ತದೆ. 2012 ಇಸವಿಯಲ್ಲೇ ಮಠದ ಗುರುಗಳು ನನ್ನ ಪಟ್ಟಾಧಿಕಾರ ರದ್ದು ಗೊಳಿಸುವಂತೆ ನ್ಯಾಯಾಲಯಕ್ಕೆ ದಾವೆ ಸಲ್ಲಿಸಿದ್ದಾರೆ. ಈ ದಾವೆ ನ್ಯಾಯಾಲಯದಲ್ಲಿದೆ, ಇನ್ನೂ ಇತ್ಯರ್ಥವಾಗಿಲ್ಲ. ಹೀಗಿರುವಾಗ ಶ್ರೀಶೈಲ ಮತ್ತು ಉಜ್ಜಯಿನಿ ಜಗದ್ಗುರುಗಳು ರಾತ್ರೋರಾತ್ರಿ ಮಠಕ್ಕೆ ಬೇರೆ ಸ್ವಾಮೀಜಿ ನೇಮಕ ಮಾಡಿದ್ದಾರೆ.
ಶಹಾಪುರದ ಸೂಗೂರೇಶ್ವರ ಪಂಡಿತಾರಾಧ್ಯ ಸ್ವಾಮೀಜಿ ಅವರನ್ನ ಪಟ್ಟಾಧಿಕಾರಿಯಾಗಿ ನೇಮಿಸಿ ಅಕ್ರಮ ಎಸಗಿದ್ದಾರೆ. ಮಠದ ಆಸ್ತಿ ಕಬಳಿಸುವ ದುರುದ್ದೇಶದಿಂದ ಬೇರೆ ಪಟ್ಟಾಧಿಕಾರಿ ನೇಮಕ ಮಾಡಲಾಗಿದೆ. ಅಲ್ಲದೇ, ನನ್ನನ್ನ ಮಠದಿಂದ ಬಲವಂತವಾಗಿ ಹೊರ ಹಾಕಿದ್ದಾರೆ. ಈ ಬಗ್ಗೆ ಕುರುಗೋಡು ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವೆ ಎಂದು ದೂರಿದರು.
ಇದನ್ನೂ ಓದಿ : ಪ್ರತಿ ದಿನ 5 ಲಕ್ಷದಂತೆ ತಿಂಗಳಿಗೆ 1.5 ಕೋಟಿ ಡೋಸ್ ಲಸಿಕೆ ಒದಗಿಸಲು ಪಿಎಂಗೆ ಸಿಎಂ ಮನವಿ
ಕೊಟ್ಟೂರಿನ ಹಿರೇಮಠದ ಯೋಗಿ ರಾಜೇಂದ್ರ ಶ್ರೀಗಳು ಮಾತನಾಡಿ, ರಾಘವಾಂಕ ಮಠಕ್ಕೆ ಕೋಟ್ಯಂತರ ಬೆಲೆ ಬಾಳುವ ಆಸ್ತಿ ಇದೆ. ವಾಣಿಜ್ಯ ಮಳಿಗೆಗೆಳಿಂದ ಅಂದಾಜು 2 ಲಕ್ಷ ರೂ.ಗಳವರೆಗೂ ಬಾಡಿಗೆ ಬರಲಿದೆ. ಇದರ ಮೇಲೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕಣ್ಣು ಬಿದ್ದಿದೆ. ಶ್ರೀಶೈಲ-ಉಜ್ಜಯಿನಿ ಪೀಠದ ಜಗದ್ಗುರುಗಳು ಅದಕ್ಕೆ ಸಾಥ್ ನೀಡುತ್ತಿರೋದು ಕಾನೂನು ಬಾಹಿರ ಕೃತ್ಯ ಎಂದು ಆರೋಪಿಸಿದ್ದಾರೆ.