ಬಳ್ಳಾರಿ:ಜಿಲ್ಲಾದ್ಯಂತ ಅಂದಾಜು 32 ಸಮುದಾಯ ಶೌಚಾಲಯಗಳು ಮಂಜೂರಾಗಿವೆ. ಆ ಪೈಕಿ 30 ಶೌಚಾಲಯಗಳ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿರುವುದು ಕಡತಗಳಲ್ಲಿ ಮಾತ್ರ!
ನಗರ-ಪಟ್ಟಣ, ಹೋಬಳಿ ಹಾಗೂ ಗ್ರಾಮೀಣ ಪ್ರದೇಶಗಳನ್ನು ಬಹಿರ್ದೆಸೆ ಮುಕ್ತ ಮಾಡುವ ಸಲುವಾಗಿ ಸಮುದಾಯ ಶೌಚಾಲಯಗಳ ನಿರ್ಮಾಣ ಕಾರ್ಯಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ, ಜಿಲ್ಲಾ ಪಂಚಾಯಿತಿ ಕಡತಗಳಲ್ಲಿ ಮಾತ್ರ ಶೌಚಾಲಯ ನಿರ್ಮಾಣ ಕಾರ್ಯ ಮುಕ್ತಾಯಗೊಳಿಸಿದೆ.
ಮುಕ್ತಾಯಗೊಂಡಿರುವ ಶೌಚಾಲಯಗಳ ಮಾಹಿತಿ, ಅವುಗಳ ಭಾವಚಿತ್ರ ಅಥವಾ ವಿಡಿಯೋ ಚಿತ್ರೀಕರಣವಾಗಲೀ ಜಿಪಂ ಬಳಿ ಮಾಹಿತಿ ಇಲ್ಲ. ಶೌಚಾಲಯಗಳ ನಿರ್ಮಾಣದ ಕುರಿತು ಮಾಧ್ಯಮಗಳಿಗೆ ಜಿಲ್ಲಾ ಪಂಚಾಯಿತಿ ಮಾಹಿತಿ ನೀಡುತ್ತಿಲ್ಲ. 30 ಶೌಚಾಲಯ ನಿರ್ಮಾಣ ಮುಗಿದಿದೆ ಎಂದು ಬಾಯಿ ಮಾತಿನಲ್ಲಿ ಮಾತ್ರ ಹೇಳಲಾಗುತ್ತಿದೆ.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಶೌಚಾಲಯಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಶುಚಿತ್ವದ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪಾಲಿಕೆಯು ಕೈಚೆಲ್ಲಿ ಕುಳಿತಿರುವುದು ಬೆಳಕಿಗೆ ಬರುತ್ತದೆ. ಈ ಸಂಬಂಧ ಈಟಿವಿ ಭಾರತ್ ಪ್ರತಿನಿಧಿ, ಪಾಲಿಕೆ ಆಯುಕ್ತರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು, ಜಿಲ್ಲೆಯ ತಾಲೂಕುಗಳಲ್ಲಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. 32ರ ಪೈಕಿ 30 ಸಮುದಾಯ ಶೌಚಾಲಯಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೇವಲ ಎರಡು ಸಮುದಾಯ ಶೌಚಾಲಯಗಳ ನಿರ್ಮಾಣ ಕಾರ್ಯ ಬಾಕಿಯಿದೆ. ಅವು ಕೂಡ ಶೀಘ್ರವೇ ಪೂರ್ಣಗೊಳ್ಳಲಿವೆ ಎಂದರು.