ಹೊಸಪೇಟೆ (ವಿಜಯನಗರ): ವ್ಯಕ್ತಿಯೊಬ್ಬ ತನಗೆ ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತೆಗೆದುಕೊಂಡು ಬಂದ ಘಟನೆ ಜಿಲ್ಲೆಯ ಕಂಪ್ಲಿ ತಾಲೂಕು ಉಪ್ಪಾರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ಕಾಡಪ್ಪ (30) ಹಾವು ಕಚ್ಚಿಸಿಕೊಂಡ ವ್ಯಕ್ತಿ. ಈತ ಹೊಲದಲ್ಲಿ ಕೆಲಸ ಮಾಡುವಾಗ ಎಡ ಮುಂಗೈಗೆ ನಾಗರಹಾವೊಂದು ಕಚ್ಚಿತ್ತು. ಈ ವೇಳೆ ಕಾಡಪ್ಪ ತನಗೆ ಕಚ್ಚಿದ ನಾಗರಹಾವನ್ನೇ ಹಿಡಿದುಕೊಂಡು ತನ್ನ ಚಿಕ್ಕಪ್ಪನ ಮಗನ ಸಹಾಯದಿಂದ ಬೈಕ್ನಲ್ಲಿ ವೈದ್ಯರ ಬಳಿಗೆ ತೆರಳಿದ್ದಾನೆ.
ತನಗೆ ಕಚ್ಚಿದ ನಾಗರಹಾವನ್ನೇ ಜೀವಂತವಾಗಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ! ಹಾವು ಹಿಡಿದುಕೊಂಡು ಮೊದಲು ಸಮೀಪದ ಮೆಟ್ರಿ ಗ್ರಾಮದ ಸ್ಥಳೀಯ ವೈದ್ಯರೊಬ್ಬರ ಬಳಿಗೆ ಕಾಡಪ್ಪ ಹೋಗಿದ್ದ. ಈತನ ಕೈಯಲ್ಲಿ ಜೀವಂತ ಹಾವು ಕಂಡ ವೈದ್ಯರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಕಂಪ್ಲಿಯ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ.
ಅಲ್ಲಿಗೆ ತೆರಳಿದ ಕಾಡಪ್ಪನಿಗೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಬಳ್ಳಾರಿಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಬಳ್ಳಾರಿ ಆಸ್ಪತ್ರೆಗೆ ತೆರಳಿದಾಗ ಕಾಡಪ್ಪನ ಕೈಯಲ್ಲಿದ್ದ ಹಾವನ್ನು ಬಿಡಿಸಿ ಸಾರ್ವಜನಿಕರು ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾರೆ.