ಬಳ್ಳಾರಿ: ಮೂರನೇ ಹಂತದ ಲಾಕ್‌ಡೌನ್ ಎಫೆಕ್ಟ್‌ನಿಂದ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆ ಹೊರತುಪಡಿಸಿ ಕೆಲ ನಿಯಮ ಸಡಿಲಿಕೆಗೊಳಿಸಿದರು ಕೂಡ ಇನ್ನೂ ವಲಸೆ ಕಾರ್ಮಿಕರ ಪರದಾಟ ಮಾತ್ರ ನಿಂತಿಲ್ಲ.
ದೇಶದ ನಾನಾ ರಾಜ್ಯಗಳಿಂದ ಕೂಲಿ ಅರಸಿ ಕರ್ನಾಟಕ ರಾಜ್ಯದ ನಾನಾ ಜಿಲ್ಲೆಗಳಿಗೆ ಬಂದಿಳಿದ ವಲಸೆ ಕಾರ್ಮಿಕರು ಇಲ್ಲಿಂದ ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಹರಿಯಾಣ, ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ, ಬಿಹಾರ, ರಾಜಸ್ಥಾನ್, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿ ನಾನಾ ರಾಜ್ಯದ ಕೂಲಿ ಕಾರ್ಮಿಕರು ರಾಜ್ಯದಲ್ಲಿದ್ದಾರೆ.
ಈ ಕೂಲಿಕಾರ್ಮಿಕರು ಅಸುರಕ್ಷತೆಯ ತಾಣಗಳಲ್ಲಿ ನೆಲೆಸಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲೂ ಕೂಡ ರಾಜ್ಯ ಸರ್ಕಾರವು ಮೀನಾಮೇಷ ಎಣಿಸುತ್ತಿದೆ. ಅತ್ತ ತಮ್ಮ ರಾಜ್ಯಗಳತ್ತ ತೆರಳಲು ಸಾಧ್ಯವಾಗದೇ ಇತ್ತ ಕರ್ನಾಟಕದಲ್ಲೂ ಉಳಿದುಕೊಳ್ಳದೇ ಒಂದು ರೀತಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗುವ ಸನ್ನಿವೇಶ ಸಾಮಾನ್ಯವಾಗಿ ಬಿಟ್ಟಿದೆ.
ಚಿತ್ರದುರ್ಗ ಜಿಲ್ಲೆಯಿಂದ ಬಳ್ಳಾರಿಗೆ ಕಾರ್ಮಿಕರು ಬಂದಿಳಿದಿದ್ದಾರೆ. ನೆರೆಯ ಚಿತ್ರದುರ್ಗ ಜಿಲ್ಲೆಯ ಖಾಸಗಿ ಕಂಪನಿಯೊಂದರಲ್ಲಿ ವಲಸೆ ಕಾರ್ಮಿಕರು ಕೆಲಸ ಮಾಡುತಿದ್ದರು. ಈಗ ಆ ಖಾಸಗಿ ಕಂಪನಿಯ ಮಾಲೀಕರು ಕೆಲಸ, ಸಂಬಳ ಕೊಡದೆ ಹೊರ ಹಾಕಿದ್ದಾರೆ.
ಹೇಗಾದರೂ ಮಾಡಿ ತಮ್ಮ ತಮ್ಮ ಊರುಗಳಿಗೆ ಸೇರಬೇಕೆಂದು ನಿರ್ಧರಿಸಿದ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಬಳ್ಳಾರಿ ಮಾರ್ಗವಾಗಿ ಉತ್ತರಪ್ರದೇಶಕ್ಕೆ ಹೊರಟಿದ್ದಾರೆ. ಚಿತ್ರದುರ್ಗದಿಂದ ಬಳ್ಳಾರಿ ಮಾರ್ಗವಾಗಿ ಯುಪಿಗೆ ಹೊರಟಿದ್ದ ಕಾರ್ಮಿಕರನ್ನ ರಸ್ತೆಯ ಮಾರ್ಗದಲ್ಲೇ ಬಳ್ಳಾರಿ ಜಿಲ್ಲಾಡಳಿತ ತಡೆದು, ಊಟ -ವಸತಿ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಭರವಸೆ ನೀಡಿದೆ.