ಗದ್ದೆಯಲ್ಲಿ ನರಳಿ ಪ್ರಾಣ ಬಿಟ್ಟ ಹೆಣ್ಣು ಕರಡಿ ಬಳ್ಳಾರಿ:ವನ್ಯಜೀವಿ ವಲಯ ಎಂದು ಘೋಷಿಸಲಾಗಿರುವ ಕಂಪ್ಲಿ ಬಳಿಯ ರಾಜ್ಯ ಹೆದ್ದಾರಿ-29ರ ಮೆಟ್ರಿ-ದೇವಲಾಪುರ ಮಧ್ಯೆ ಇರುವ ಮಾರೆಮ್ಮ ದೇವಸ್ಥಾನ ಬಳಿ ವಾಹನ ಅಪಘಾತದಿಂದ ಕರಡಿಯೊಂದು ಸಾವನ್ನಪ್ಪಿದೆ. ಭಾನುವಾರ ನಸುಕಿನಲ್ಲಿ ಅಪರಿಚಿತ ವಾಹನ ಹೆಣ್ಣು ಕರಡಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಕರಡಿಯ ಹಿಂದಿನ ಎಡಗಾಲಿಗೆ ಬಲವಾದ ಪೆಟ್ಟು ತಗುಲಿ ತೀವ್ರ ರಕ್ತಸ್ರಾವವಾಗಿದೆ.
ಅಪಘಾತ ನಂತರ ಗಂಭೀರ ಗಾಯ ರಕ್ತಸಾವ್ರದಿಂದ ಎದ್ದು ಹೋಗಲಾರದೇ ಕರಡಿ ಹೆದ್ದಾರಿ ಪಕ್ಕದ ಗದ್ದೆಯಲ್ಲಿ ನರಳಿದೆ. ಇದನ್ನು ಗಮನಿಸಿದ ದಾರಿ ಹೋಕರು ದರೋಜಿ ಕರಡಿಧಾಮದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನೀರು ಕುಡಿಸಿದ್ದಾರೆ. ಆದರೆ ಅತಿಯಾದ ರಕ್ತಸ್ರಾವದಿಂದ ಸ್ವಲ್ಪ ಸಮಯದಲ್ಲಿ ಅದು ಮೃತಪಟ್ಟಿದೆ. ಈ ಕುರಿತು ಕರಡಿಧಾಮದ ಉಪ ವಲಯ ಅರಣ್ಯ ಅಧಿಕಾರಿ ಸಂತೋಷ ಕೆ. ನಂದಿಗಟ್ಟಿ ಮಾತನಾಡಿ, ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಿಂದ ಈ ಘಟನೆ ನಡೆದಿರುವುದು ಪ್ರಾಥಮಿಕವಾಗಿ ಕಂಡುಬರುತ್ತಿದೆ.
ಸುಮಾರು 5 ರಿಂದ 6 ವರ್ಷದ ಹೆಣ್ಣು ಕರಡಿಯಾಗಿದ್ದು, ಇದರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸುವುದಾಗಿ ತಿಳಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಇನ್ನು, ಮೃತ ಕರಡಿಯ ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಜನರು ದೌಡಾಯಿಸಿದ್ದು, ಕರಡಿಯನ್ನು ವೀಕ್ಷಿಸಲು ಸ್ಥಳದಲ್ಲಿ ಜನರ ದಂಡೇ ಸೇರಿತ್ತು.
ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡ ಪಾರ್ವತಮ್ಮ ರಾಜ್ಕುಮಾರ್ ತಮ್ಮನ ಮಗ
ರಾಜ್ಯ ಹೆದ್ದಾರಿ ಸೇರಿದಂತೆ ಸುತ್ತಲಿನ ಕೆಲ ಹಳ್ಳಿಗಳ ಪ್ರದೇಶವನ್ನು ವನ್ಯಜೀವಿ ವಲಯ ಎಂದು ಘೋಷಿಸಲಾಗಿದೆ. ಆದರೆ ವಿಪರ್ಯಾಸ ರಾಜ್ಯ ಹೆದ್ದಾರಿ ವ್ಯಾಪ್ತಿಯ ವನ್ಯಜೀವಿ ವಲಯ ನಿಧಾನವಾಗಿ ಸಂಚರಿಸಿ ಎನ್ನುವ ಸೂಚನಾ ಫಲಕ ಎಲ್ಲಿಯೂ ಅಳವಡಿಸಿಲ್ಲ. ಇನ್ನಾದರೂ ಇಲಾಖೆ ಈ ಕುರಿತು ಕ್ರಮ ತೆಗೆದುಕೊಳ್ಳಲಿ ಎಂದು ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಒತ್ತಾಯಿಸಿದರು. ಕೇವಲ ಅರಣ್ಯ ಇಲಾಖೆಯನ್ನು ದೂರುವುದಲ್ಲ, ಅರಣ್ಯ ಪ್ರದೇಶದಲ್ಲಿ ವಾಹನದಲ್ಲಿ ಸಂಚರಿಸುವಾಗ ಸವಾರರು ಎಚ್ಚರಿಕೆಯಿಂದ ಗಾಡಿ ಚಾಲನೆ ಮಾಡಬೇಕು.
ಇಲ್ಲವಾದರೇ ಈ ರೀತಿಯ ಅಮಾಯಕ ಪ್ರಾಣಿಗಳು ಬಲಿಯಾಗಬೇಕಾಗುತ್ತದೆ. ಇಂಥಹದೇ ಅಪಘಾತದಲ್ಲಿ ಅದೆಷ್ಟೋ ಪ್ರಾಣಿಗಳು ತಮ್ಮ ದೇಹದ ಅಂಗಾಂಗಳನ್ನು ಕಳೆದುಕೊಂಡು, ತಮ್ಮವರಿಂದ ದೂರವಾದ ಉದಾಹರಣೆಗಳು ಬೇಕಾದಷ್ಟಿವೆ. ಸಂಪರ್ಕ ಕಲ್ಪಿಸಬೇಕೆಂಬ ಕಾರಣದಿಂದ ಕಾಡನ್ನು ಕಡೆದು ರಸ್ತೆ ನಿರ್ಮಿಸಿರುವುದು ಮನುಷ್ಯರು. ಇದರಿಂದ ಕಾಡು ಪ್ರಾಣಿಗಳಿಗೆ ನೆಲೆಯೇ ಇಲ್ಲದಂತಾಗಿದೆ. ಆಹಾರ ಅರಸಿ ನಾಡಿಗೆ ಬಂದರೇ ಅಲ್ಲೂ ಅವುಗಳನ್ನು ಹಿಡಿದು ಯಾವುದೋ ಕಾಡಿಗೆ ಬಿಡಲಾಗುತ್ತದೆ. ಮಾನವನ ದುರಾಸೆಗೆ ಮೂಕ ಪ್ರಾಣಿಗಳು ಮಾತ್ರ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ ಎಂದರೆ ತಪ್ಪಗಲಾರದು.
ಇದನ್ನೂ ಓದಿ:Bear attack: ಶಿಗ್ಗಾಂವಿ: ರೈತರ ಮೇಲೆ ಕರಡಿ ದಾಳಿ.. ಇಬ್ಬರಿಗೆ ಗಂಭೀರ ಗಾಯ