ಬಳ್ಳಾರಿ: ಆರ್ಯವೈಶ್ಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದಿರುವ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಹಾಗೂ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿ, ಇದುವರೆಗೆ 6 ಕೋಟಿ ರೂ. ವಿತರಿಸಲಾಗಿದೆ. ಇನ್ನೂ ಕೆಲ ದಿನಗಳಲ್ಲಿ 4 ಕೋಟಿ ರೂ. ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಡಿ.ಎಸ್. ಅರುಣ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019-20 ನೇ ಸಾಲಿನಲ್ಲಿ ನಮ್ಮ ನಿಗಮಕ್ಕೆ 10 ಕೋಟಿ ರೂ.ಗಳನ್ನು ಸರ್ಕಾರ ಒದಗಿಸಿತ್ತು. ಅದರಂತೆ ಈಗಾಗಲೇ 6 ಕೋಟಿ ರೂ. ಖರ್ಚು ಮಾಡಲಾಗಿದ್ದು, ಉಳಿದ 4 ಕೋಟಿ ರೂ.ಗಳನ್ನು ಇನ್ನೂ ಕೆಲ ದಿನಗಳಲ್ಲಿ ಖರ್ಚು ಮಾಡಲಾಗುವುದು. ಈ ವರ್ಷದ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು 10 ಕೋಟಿ ರೂ.ಗಳನ್ನು ನಮ್ಮ ನಿಗಮಕ್ಕೆ ಮೀಸಲಿರಿಸಿದ್ದರು. ಕೋವಿಡ್ ಕಾರಣದಿಂದ 5 ಕೋಟಿ ರೂ. ಕಡಿತ ಮಾಡಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಇನ್ನೂ 15 ಕೋಟಿ ರೂ.ಗಳನ್ನು ನಿಗಮಕ್ಕೆ ಹೆಚ್ಚುವರಿಯಾಗಿ ಒದಗಿಸುವಂತೆ ಕೋರಲಾಗಿದೆ ಎಂದರು.