ಚಿಕ್ಕೋಡಿ:ರಸ್ತೆ ಅಗಲೀಕರಣ ವಿವಾದದಲ್ಲಿ ಸಾರ್ವಜನಿಕರಿಂದ ದಿನಂಪ್ರತಿ ಕಿರಕುಳ ತಾಳಲಾರದೆ ಮಹಿಳೆಯೊಬ್ಬಳು ವಿಷ ಸೇವಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.
ಸಾವಿತ್ರಿ ಮಾಹಾವೀರ ಪಾಟೀಲ (48) ವಿಷ ಸೇವಿಸಿದ ಮಹಿಳೆ. ಇವರು ಗೈರಾಣ ಜಾಗದಲ್ಲಿ ಮನೆ ಹಾಗೂ ಅಂಗಡಿ ನಿರ್ಮಾಣ ಮಾಡಿದ್ದಾರೆಂದು ಸಾರ್ವಜನಿಕರು ಅವರಿಗೆ ಕಳೆದ ಒಂದು ತಿಂಗಳಿನಿಂದ ಮಾನಸಿಕ ತೊಂದರೆ ಕೊಡುತ್ತಿದ್ದರಂತೆ. ಇದರಿಂದ ಸಾವಿತ್ರಿ ಮಾನಸಿಕವಾಗಿ ಅಸ್ವಸ್ಥಗೊಂಡು ಒಂದು ವಾರದಿಂದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ನಿನ್ನೆ ಕೆಲ ಕಿಡಿಗೇಡಿಗಳು ನಿಮ್ಮ ಮನೆ ಹಾಗೂ ಅಂಗಡಿಯನ್ನು ಜೆಸಿಬಿ ಮೂಲಕ ಕಿತ್ತು ಹಾಕಲಾಗುವುದು ಎಂದು ಪಟಾಕಿ ಸಿಡಿಸಿ ಸಾವಿತ್ರಿ ಮನೆ ಮುಂದೆ ಸಂಭ್ರಮಾಚರಣೆ ಮಾಡಿದ್ದಾರೆ. ಇದರಿಂದ ಮಾನಸಿಕವಾಗಿ ಕುಗ್ಗಿದ ಸಾವಿತ್ರಿ ಇಂದು ಬೆಳಗಿನ ಜಾವ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಮಹಿಳೆಯನ್ನು ತಕ್ಷಣ ಸ್ಥಳೀಯರು ಅಂಕಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂಟು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡ ಸಾವಿತ್ರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಒಬ್ಬಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಇನ್ನೊಬ್ಬ ಮಗಳು ಹಾಗೂ ಸಾವಿತ್ರಿ ಉಪ ಜೀವನವನ್ನು ಈ ಅಂಗಡಿ ಆಧಾರದ ಮೇಲೆ ನಡೆಸುತ್ತಿದ್ದು, ಇದ್ದಕ್ಕಿದ್ದಂತೆ ಈಗ ಅಂಗಡಿ ತೆರವು ಮಾಡಲು ಮುಂದಾದಾಗ ಮನನೊಂದು ಸಾವಿತ್ರಿ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.