ಬೆಳಗಾವಿ:ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಇದರ ಪರಿಣಾಮ ಜಿಲ್ಲೆಯ ಬೈಲಹೊಂಗಲದಲ್ಲಿನ ಸುಡಗಾಡು ಸಿದ್ಧರು ಹಾಗೂ ಬೀದಿ ಬದಿ ಚಿಂದಿ ಆಯುವವರು ಸುಮಾರು ನಾಲ್ಕು ದಿನಗಳಿಂದ ಊಟವಿಲ್ಲದೇ, ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ.
ಲಾಕ್ಡೌನ್ ಆದೇಶದಿಂದ ತಮ್ಮ ಜೋಪಡಿಯಲ್ಲೇ ಕಳೆದ ಹತ್ತು ದಿನಗಳಿಂದ ಇರುವುದರಿಂದ, ಮನೆಯಲ್ಲಿದ್ದ ಕಾಳು ಕಡಿಯೆಲ್ಲಾ ಖಾಲಿ ಆಗಿದೆ. ಇದರಿಂದ ಕೈಯಲ್ಲಿ ಹಣವಿಲ್ಲ, ದುಡಿದು ತಿನ್ನಬೇಕೆಂದರೆ ಅವಕಾಶವಿಲ್ಲ. ಹೀಗಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಇಲ್ಲಿನ ಸುಮಾರು 40ಕ್ಕೂ ಹೆಚ್ಚು ಕುಂಟುಂಬಗಳು ಉಪವಾಸವಿದ್ದಾರೆ.
ಅನ್ನಕ್ಕೆ ಪರದಾಡುತ್ತಿದ್ದಾರೆ ಸುಡುಗಾಡು ಸಿದ್ದರು, ಚಿಂದಿ ಆಯುವರು ವಾಸಿಸಲು ಮನೆಗಳೂ ಸಹ ಇಲ್ಲದೇ ಸಣ್ಣ- ಸಣ್ಣ ಜೋಪಡಿಗಳನ್ನು ನಿರ್ಮಿಸಿಕೊಂಡು 40ಕ್ಕೂ ಅಧಿಕ ಕುಟುಂಬಗಳು ವಾಸಮಾಡುತ್ತಿವೆ. ಇದರಲ್ಲಿ ವಯಸ್ಸಾದವರು - ಮಕ್ಕಳು ಭಿಕ್ಷಾಟನೆಗೆ ಬೈಲಹೊಂಗಲ ಸೇರಿದಂತೆ ಹಳ್ಳಿಗಳಿಗೆ ನಿತ್ಯ ತೆರಳುತ್ತಿದ್ದರೆ, ಇನ್ನು ಯುವಕರು ಹಾಗೂ ಮಹಿಳೆಯರು ಕೂಲಿ-ನಾಲಿ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದಾರೆ. ಪೊಲೀಸರ ಲಾಠಿ ಏಟಿನ ಭಯದಿಂದಾಗಿ, ಇತ್ತ ಭಿಕ್ಷೆಯೂ ಇಲ್ಲ. ಅತ್ತ ಕೂಲಿ ಕೆಲಸವೂ ಇಲ್ಲ. ಹೀಗಾಗಿ ಒಂದು ದಿನಕ್ಕೆ ಬೇಕಾಗುವಷ್ಟೇ ಮಾತ್ರ ದುಡಿದು ಬದಕುವ ಈ ಜನಾಂಗದವರು, ಈಗ ಮಾಡಲು ಕೆಲಸವಿಲ್ಲದೇ, ಬಿಕ್ಷಾಟನೆಯ ಇಲ್ಲದೇ ತುತ್ತು ಊಟಕ್ಕಾಗಿ ಹಪಹಪಿಸುವಂತಾಗಿದೆ.
ಕಾಯಕವೇ ಕೈಲಾಸ ಎನ್ನುವ ಸುಡುಗಾಡು ಸಿದ್ಧರಿಗೆ ಹಳ್ಳಿಯ ಜನರು ನೀಡುವ ದವಸ ಧಾನ್ಯ ಹಾಗೂ ಪುಡಿಗಾಸೇ ಅಂದಿನ ಊಟಕ್ಕೆ ಆಧಾರ. ಹೀಗೆ ಪ್ರತಿದಿನ ಹಳ್ಳಿಗಳಲ್ಲಿ ತೆರಳಿ ಜೀವನ ನಡೆಸೋ ಇವರ ಜೀವನವೇ ಲಾಕ್ಡೌನ್ ಆಗಿದೆ.
ಅನ್ನಕ್ಕೆ ಪರದಾಡುತ್ತಿದ್ದಾರೆ ಸುಡುಗಾಡು ಸಿದ್ದರು, ಚಿಂದಿ ಆಯುವರು ದಯವಿಟ್ಟು ಸಹಾಯಮಾಡಿ ಎಂದು ಬೇಡಿಕೊಳ್ಳುತ್ತಿರೋ ಬಾಲಕಿ:ಕಳೆದ ಮೂರು ದಿನಗಳಿಂದ ಊಟ ಮಾಡಿಲ್ಲ. ಮೂರು ಹೊತ್ತು ಊಟ ಕೊಟ್ರೆ ಸಾಕು ಎನ್ನುತ್ತಿರೋ ಬಾಲಕಿ ಮಾತನ್ನು ಈ ಭಾಗದ ಸಂಸದರು, ಶಾಸಕರು ಕೇಳಿಸಿಕೊಳ್ಳಬೇಕು. ಇನ್ನು ಕಾಯಕವೇ ಕೈಲಾಸ ಎಂದು ನಿತ್ಯ ದುಡಿದು ಬದುಕುತ್ತಿರುವ ಕುಟುಂಬಗಳು ಕೊರೊನಾ ಹೆಮ್ಮಾರಿ ಹಿನ್ನೆಲೆಯಲ್ಲಿ ಅಕ್ಷರಶಃ ಬೀದಿಗೆ ಬಂದಿವೆ. ಕೆಲಸವಿಲ್ಲದೇ ಹಸಿದ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.