ಚಿಕ್ಕೋಡಿ:ಮಾಂಸಕ್ಕಾಗಿ ಎಂಟು ನವಿಲುಗಳನ್ನು ಬೇಟೆಯಾಡಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಪ್ರಕರಣದಲ್ಲಿ ಮೂವರು ಭಾಗಿಯಾಗಿದ್ದು, ಸದ್ಯ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
ನವಿಲು ಬೇಟೆಯಾಡಿದವರುನ್ನು ಹಿಡಿಯಲು ತೆರಳುತ್ತಿದ್ದಂತೆ, ನದಿ ನೀರಿನಲ್ಲಿ ಈಜಿ ದಡ ಸೇರಿ ಬಳಿಕ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗೌರಾಣಿ ಸ್ಥಳಕ್ಕೆ ಬಂದು, ಗ್ರಾಮಸ್ಥರಿಂದ ಮಾಹಿತಿ ಪಡೆದರು. ಬಳಿಕ ಮೃತ ನವಿಲುಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಘಟನೆ ಸಂಬಂಧ ಆಳಂದದ ಝಳ್ಕಿ ಗ್ರಾಮದ ಮಂಜುನಾಥ್ ಬೇಷ್ಣು ಪವಾರ್ ಎಂಬ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಿದ್ದಾರೆ.