ಬೆಳಗಾವಿ:ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮಸ್ಥರು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದು, ರಸ್ತೆಗೆ ಹಗ್ಗ ಕಟ್ಟಿ ನಡು ರಸ್ತೆಯಲ್ಲೇ ಕುಳಿತು ಭಜನೆ ಮಾಡುತ್ತಿದ್ದಾರೆ.
ರಸ್ತೆಯಲ್ಲೇ ಗ್ರಾಮಸ್ಥರ ಭಜನೆ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮಸ್ಥರು ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳವಡಿ ಗ್ರಾಮದಿಂದ ಬುಡರಕಟ್ಟಿವರೆಗೆ ಸಂಪೂರ್ಣವಾಗಿ ರಸ್ತೆ ಹದಗೆಟ್ಟಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಪ್ರತಿಭಟನಾನಿರತರು ಪೊಲೀಸರೊಂದಿಗೆ ವಾಗ್ವಾದ ಮಾಡುತ್ತಿದ್ದಾರೆ.
ಧಾರವಾಡ ಮತ್ತು ಬೈಲಹೊಂಗಲ ನಡುವೆ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಬಂದ್ ಮಾಡಿ ರಸ್ತೆಯಲ್ಲೇ ಭಜನೆ ಮಾಡುತ್ತಾ ಧರಣಿ ಮುಂದುವರೆಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು. ಹದಿನೈದು ದಿನದ ಒಳಗಾಗಿ ರಸ್ತೆ ದುರಸ್ತಿ ಕಾಮಗಾರಿ ಕೆಲಸ ಆರಂಭಿಸುವಂತೆ ಪಟ್ಟು ಹಿಡಿದಿದ್ದಾರೆ.
ರಸ್ತೆ ಬಂದ್ ಆಗಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೈಲಹೊಂಗಲ ತಹಶೀಲ್ದಾರ ಹಾಗೂ ಸ್ಥಳೀಯ ಪೊಲೀಸರು ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಪಟ್ಟು ಬಿಡದ ಗ್ರಾಮಸ್ಥರು ಡಿಸಿ ಬರುವವರೆಗೂ ವಾಹನ ಸಂಚಾರ ಆರಂಭಿಸಲು ಅನುವು ಮಾಡಿಕೊಡುವುದಿಲ್ಲ ಎನ್ನುತ್ತಿದ್ದಾರೆ. ಇತ್ತ ಕಳೆದ ಒಂದು ಗಂಟೆಯಿಂದ ರಸ್ತೆ ಸಂಚಾರ ಬಂದ್ ಆಗಿದ್ದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.