ಅಥಣಿ(ಬೆಳಗಾವಿ):ಸ್ಮಶಾನಕ್ಕೆ ಹೋಗುವುದಕ್ಕೆ ದಾರಿ ಇಲ್ಲವೆಂದು ನಣದಿವಾಡಿ ಗ್ರಾಮಸ್ಥರು ಚಿಕ್ಕೋಡಿ-ಯಕ್ಸಂಬಾ ರಸ್ತೆ ಮಧ್ಯದಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ ಗ್ರಾಮದ ರುದ್ರ ಭೂಮಿಗೆ ಗ್ರಾಮದ ಯಕ್ಸಂಬಿ ಕುಟುಂಬಸ್ಥರು ಸ್ಮಶಾನ ಭೂಮಿಯ ದಾರಿಯನ್ನು ಬಂದ್ ಮಾಡಿದ್ದಾರೆ ಎಂದು ಆರೋಪಿಸಿ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಚಿಕ್ಕೋಡಿ-ಯಕ್ಸಂಬಾ ರಸ್ತೆ ಮಧ್ಯದಲ್ಲಿ ಶವ ಇಟ್ಟು ಭಜನಾ ಪದಗಳನ್ನು ಹಾಡುತ್ತ ರಸ್ತೆ ಬಂದ್ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ದಿಢೀರ್ ಪ್ರತಿಭಟನೆಯಿಂದ ಚಿಕ್ಕೋಡಿ ಯಕ್ಸಂಬಾ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಚಿಕ್ಕೋಡಿ ತಹಶಿಲ್ದಾರ್ ಹಾಗೂ ಪಿಎಸ್ಐ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಗ್ರಾಮದ ಯಕ್ಸಂಬಿ ಕುಟುಂಬಸ್ಥರು ಸ್ಮಶಾನ ಭೂಮಿಯ ದಾರಿಯನ್ನು ಬಂದ್ ಮಾಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ರಸ್ತೆ ಮಧ್ಯದಲ್ಲಿ ಶವ ಇಟ್ಟು ಪ್ರತಿಭಟನೆಗೆ ಕುಳಿತ ಗ್ರಾಮಸ್ಥರು ತಹಶಿಲ್ದಾರ್ ವಿಚಾರಣೆ ಮಾಡುತ್ತಿದ್ದಂತೆ ಈ ದಾರಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಇರುವುದರಿಂದ ಈ ರಸ್ತೆಯನ್ನು ಬಂದ್ ಮಾಡಲಾಗಿದೆ. ಸ್ಮಶಾನಕ್ಕೆ ಹೋಗುವುದಕ್ಕೆ ಇನ್ನು ಮೂರು ರಸ್ತೆಗಳಿವೆ ಎಂದು ತಿಳಿಸಿದರು. ಇದಕ್ಕೆ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿ ನಮಗೆ ಅದೇ ದಾರಿ ಬೇಕು ಎಂದು ಪಟ್ಟು ಹಿಡಿದರು. ಪೊಲೀಸರ ಹಾಗೂ ದಂಡಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಸದ್ಯದ ಮಟ್ಟಿಗೆ ಸ್ಮಶಾನಕ್ಕೆ ಹೋಗುವುದಕ್ಕೆ ದಾರಿ ಮಾಡಿಕೊಡಲಾಗಿದ್ದು, ರಸ್ತೆ ಮೇಲಿನ ಪ್ರತಿಭಟನಾಕಾರರನ್ನು ಪೊಲೀಸರು ತರಾಟೆ ತೆಗೆದುಕೊಂಡು ಅಲ್ಲಿಂದ ಚದುರಿಸಿದರು.
ಓದಿ:ಗಂಗಾವತಿ: ಸ್ಮಶಾನ ಭೂಮಿಗೆ ಒತ್ತಾಯಿಸಿ ಮಹಿಳೆಯರಿಂದ ರಸ್ತೆ ತಡೆದು ಪ್ರತಿಭಟನೆ