ಬೆಳಗಾವಿ: ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕುರಿತ ಚರ್ಚೆಗೆ ವಿಧಾನ ಪರಿಷತ್ನಲ್ಲಿ ಎರಡು ದಿನ ಮೀಸಲಿಡುವುದರ ಜೊತೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಸುವರ್ಣ ವಿಧಾನಸೌಧದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಅವರ ಜೊತೆಗೆ ಅಧಿವೇಶನ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಮೊದಲ ವಾರದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಮಂಗಳವಾರ ಮತ್ತು ಬುಧವಾರ ಎರಡು ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಮೀಸಲಿಡಲಾಗುವುದು. ಈ ಭಾಗದ ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಅಧಿವೇಶನ ನಡೆಸುವ ಮೂಲಕ ಬೆಳಗಾವಿ ಕರ್ನಾಟಕದ ಗಂಡು ಮೆಟ್ಟಿದ ಸ್ಥಳ ಎಂಬುದನ್ನು ಸಾಬೀತುಪಡಿಸಲಾಗಿತ್ತು. ಇದರಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಮಹಾರಾಷ್ಟ್ರದ ಕೂಗನ್ನು ತಗ್ಗಿಸಿದಂತಾಯಿತು. ಆದರೆ, ಸೌಧ ನಿರ್ಮಾಣದ ಆಶಯ ಮಾತ್ರ ಇನ್ನು ಈಡೇರದೇ ಇರುವುದು ವಿಪರ್ಯಾಸ ಎಂದು ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶನ ಮುಗಿದ ಬಳಿಕ ಮಹಾರಾಷ್ಟ್ರದ ನಾಗ್ಪುರ ಮತ್ತು ಮುಂಬೈಗೆ ಹೋಗಿ ಅಲ್ಲಿ ಎರಡೂ ಕಡೆ ಅಧಿವೇಶನ ಹೇಗೆ ನಡೆಸುತ್ತಾರೆ ಮತ್ತು ನಮಗೂ ಅವರಿಗೂ ಏನು ವ್ಯತ್ಯಾಸವಿದೆ ಎಂಬುದನ್ನು ತಿಳಿದುಕೊಂಡು ಬರುತ್ತೇವೆ. ಆ ರೀತಿ ರಾಜ್ಯದಲ್ಲೂ ಅಧಿವೇಶನ ನಡೆಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಹೊರಟ್ಟಿ ತಿಳಿಸಿದರು.