ಬೆಳಗಾವಿ: ಕೆಲವೊಮ್ಮೆ ಈ ದೇಶ ಮತ್ತು ಮಹಾನ್ ಪುರುಷರ ಇತಿಹಾಸವನ್ನೇ ತಿರುಚುವ ಪ್ರಯತ್ನ ನಡೆಯುತ್ತದೆ. ಆದರೆ ಇತಿಹಾಸ ಇತಿಹಾಸವಾಗಿಯೇ ಉಳಿಯಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಆವರಣದಲ್ಲಿ ಇಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.
ರಾಯಣ್ಣ, ಬಸವಣ್ಣ, ಅಂಬೇಡ್ಕರ್ ಅವರಂತಹ ಮಹಾಪುರುಷರು ಇದ್ದ ಹಾಗೆಯೇ ಇರಬೇಕು. ಯಾರೋ ಮಧ್ಯೆ ಬಂದು ಪುಸ್ತಕ ತಿರುಚಿದರೆ ಹತ್ತು ವರ್ಷದ ನಂತರ ಅದು ನಿಜವಾಗುತ್ತದೆ. ಇದೇ ಕಾರಣಕ್ಕೆ ಅಲ್ಲಲ್ಲಿ ಮಹಾನ್ ಪುರುಷರ ಮೂರ್ತಿ ಕೂರಿಸುತ್ತಿದ್ದೇವೆ ಎಂದರು. ಆರು ತಿಂಗಳ ಹಿಂದೆ ಪ್ರದರ್ಶನಗೊಂಡ ರಾಣಿ ಚನ್ನಮ್ಮ ನಾಟಕದಲ್ಲಿ ಏಕಾಏಕಿ ಟಿಪ್ಪು ಸುಲ್ತಾನ್ ಪಾತ್ರವನ್ನು ಸೇರಿಸಿದ್ದರು. ನನ್ನ ಅನುಭವದ ಪ್ರಕಾರ ಅದು ಎಲ್ಲೂ ಕನೆಕ್ಟ್ ಆಗುವುದಿಲ್ಲ. ಹೀಗಾಗಿ ಇತಿಹಾಸ ಮತ್ತು ಮಹಾಪುರುಷರ ವಿಚಾರದಲ್ಲಿ ನಾವೆಲ್ಲ ಗಂಭೀರವಾಗಿರಬೇಕು. ಇತಿಹಾಸ ತಿರುಚುವ ಪ್ರಯತ್ನಗಳು ಆಗಬಾರದು ಎಂದರು.
2013ರಲ್ಲಿ ನಾನು ಮಂತ್ರಿಯಾಗಿದ್ದಾಗ ಈ ಕಾಲೇಜು ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೆವು. ಈಗ ಇಷ್ಟು ದೊಡ್ಡದಾಗಿ ಬೆಳೆದಿರುವುದನ್ನು ನೋಡಿ ಬಹಳ ಸಂತೋಷವಾಗಿದೆ. ಈ ದೇಶವನ್ನು ನಾವೇ ಕಟ್ಟಿದ್ದೇವೆ. ಈ ರೈಲು ನಾವೇ ಮಾಡಿದ್ದೇವೆ. ಹಿಂದೆ ಏನೂ ಇರಲಿಲ್ಲ ಎಂದು ಹೇಳುತ್ತಿರುವುದು ಈಗಿನ ಚರ್ಚೆಯ ವಿಷಯವಾಗಿದೆ. ಕಟ್ಟಿದವರು ಬೇರೆ, ಪಾಪ ಅವರೆಲ್ಲ ದೂರವೇ ಉಳಿದರು. ಆದರೆ ಕಟ್ಟದೇ ಇದ್ದವರು ಈಗ ವಿಶ್ವಗುರುವಾಗಿ ಹೊರಹೊಮ್ಮಿದ್ದಾರೆ. ಇದು ದೇಶ ಮತ್ತು ರಾಜ್ಯದ ಅತ್ಯಂತ ದುರ್ದೈವದ ಸಂಗತಿ ಎನ್ನುವ ಮೂಲಕ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಯಾರು ಮಾಡಿದ್ದಾರೆ ಅವರನ್ನು ಅಭಿನಂದಿಸಬೇಕು ಮತ್ತು ನೆನೆಯಬೇಕು. ಯಾರು ಕೆಲಸ ಮಾಡಿದ್ದಾರೆ ಅವರಿಗೆ ನಿಜವಾಗಿ ಶ್ರೇಯಸ್ಸು ಸಿಗಬೇಕು ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣವಾಗಿದ್ದು ಬಹಳ ಹೆಮ್ಮೆಯ ವಿಷಯ. ಈ ಭಾಗದಲ್ಲಿ ಹೋರಾಟ ಮತ್ತು ಸ್ವಾತಂತ್ರ್ಯ ಯಾವ ರೀತಿ ಇರುತ್ತದೆ, ಜನರಿಗೆ ರಕ್ಷಣೆ ಕೊಟ್ಟು ಸ್ವಾಭಿಮಾನ ಬಿತ್ತಿದ ಮಹಾನ್ ನಾಯಕ ರಾಯಣ್ಣ ಹೆಸರಿನಲ್ಲಿ ಸಾಕಷ್ಟು ಪುಸ್ತಕ, ನಾಟಕ, ಸಿನಿಮಾಗಳಿವೆ. ಅವರ ಹೋರಾಟ, ಜೀವನ ಚರಿತ್ರೆಯನ್ನು ಬೇರೆ ಬೇರೆ ವಿಧಾನದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರತಿದಿನ ಇನ್ಮುಂದೆ ನಿಮ್ಮ ಕಣ್ಮುಂದೆ ಅವರು ಇರುತ್ತಾರೆ. ಅವರ ಹೋರಾಟದ ದಾರಿಯನ್ನು ನೀವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸತೀಶ್ ಜಾರಕಿಹೊಳಿ ಕಿವಿಮಾತು ಹೇಳಿದರು.