ಕರ್ನಾಟಕ

karnataka

ETV Bharat / state

ಪತ್ನಿಯರ ಹೆಸರಲ್ಲಿ ತಿನಿಸು ಕಟ್ಟೆ ಮಳಿಗೆ ಆರೋಪ: ಇಬ್ಬರು ನಗರಸೇವಕರ ಮೇಲೆ ಸದಸ್ಯತ್ವ ರದ್ದತಿಯ ತೂಗುಗತ್ತಿ - Belagavi Corporation members

ತಮ್ಮ ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದ ಇಬ್ಬರು ಬಿಜೆಪಿ ನಗರ ಸೇವಕರ ಸದಸ್ಯತ್ವ ಅನರ್ಹತೆಗೆ ಸುಜೀತ್ ಮುಳಗುಂದ ಅವರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.

have got a shop in the name of their wife
ಪತ್ನಿ ಹೆಸರಲ್ಲಿ ಮಳಿಗೆ ಪಡೆದಿರುವ ಆರೋಪ

By ETV Bharat Karnataka Team

Published : Nov 30, 2023, 12:54 PM IST

Updated : Nov 30, 2023, 3:01 PM IST

ಸಚಿವ ಸತೀಶ್​ ಜಾರಕಿಹೊಳಿ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಳಗಾವಿ:ನಗರದ ತಿನಿಸು ಕಟ್ಟೆಯಲ್ಲಿ ತಮ್ಮ ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿರುವ ಇಬ್ಬರು ಬಿಜೆಪಿ ನಗರ ಸೇವಕರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಅವರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗೆ ತನಿಖೆ ನಡೆಸುವಂತೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿಯವರು ಮಹಾನಗರ ಪಾಲಿಕೆ ಆಯುಕ್ತರಿಗೆ ಈ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ತಿನಿಸು ಕಟ್ಟೆ ವಿವಾದ ಈಗ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.

ಬೆಳಗಾವಿ ಬಸವೇಶ್ವರ ವೃತ್ತದ ಬಳಿ ನಿರ್ಮಿಸಿರುವ ತಿನಿಸುಕಟ್ಟೆಯ ಮಳಿಗೆಗಳನ್ನು ಕಾನೂನು ಬಾಹಿರವಾಗಿ ಹಂಚಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಇತ್ತೀಚೆಗೆ ಬೆಂಗಳೂರಿನಿಂದ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳ ತಂಡ ತಿನಿಸುಕಟ್ಟೆಗೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು. ಮಳಿಗೆಗಳ ಹಂಚಿಕೆಯಲ್ಲಿ ಸ್ಥಳೀಯ ಶಾಸಕ ಅಭಯ್​ ಪಾಟೀಲ ಅವರು ತಮ್ಮ ಪ್ರಭಾವ ಬಳಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಇದೀಗ ಇದು ಮತ್ತೊಂದು ಹಂತಕ್ಕೆ ಹೋಗಿ ತಲುಪಿದೆ.

ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಎಂಬುವರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದಾರೆ. ವಾರ್ಡ್ 23ರ ನಗರ ಸೇವಕ ಜಯಂತ ಜಾಧವ್​, ವಾರ್ಡ್ 41 ರ ನಗರಸೇವಕ ಮಂಗೇಶ ಪವಾರ್ ತಮ್ಮ ರಾಜಕೀಯ ಪ್ರಭಾವದಿಂದ ತಿನಿಸು ಕಟ್ಟೆಯಲ್ಲಿ ತಮ್ಮ ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

ಸುಜೀತ್ ಮುಳಗುಂದ ಅವರು ಪ್ರಾದೇಶಿಕ ಆಯುಕ್ತರಿಗೆ ನೀಡಿರುವ ದೂರಿನಲ್ಲಿ, ಕೆಎಂಸಿ ಕಾಯ್ದೆ-1976, ಸೆಕ್ಷನ್ 26(1)(ಕೆ) ಸ್ಪಷ್ಟ ಉಲ್ಲಂಘನೆ ಮಾಡಿರುವ ನಗರಸೇವಕರಾದ ಜಯಂತ್ ಜಾಧವ್, ಮಂಗೇಶ್ ಪವಾರ್ ಇಬ್ಬರ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಕೋರಿದ್ದರು. ಈ ಬಗ್ಗೆ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳ ಬಳಿ ವರದಿ ಕೇಳಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಮಹಾನಗರ ಪಾಲಿಕೆ ಆಯುಕ್ತರಿಗೆ ಕೂಲಂಕಷವಾಗಿ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಂಡು, ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಈ ಕುರಿತಂತೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಸುಜೀತ್ ಮುಳಗುಂದ, ನಿರ್ಗತಿಕ, ಬಡ ಮಹಿಳೆಯರಿಗೆ ನೀಡಬೇಕಿದ್ದ ಮಳಿಗೆಗಳನ್ನು ಇಬ್ಬರು ನಗರಸೇವಕರು ಸೇರಿದಂತೆ ಶ್ರೀಮಂತರಿಗೆ ನೀಡಲಾಗಿದೆ. ಚುನಾಯಿತರಾದ ಬಳಿಕ ಆ ಇಬ್ಬರು ನಗರಸೇವಕರು ಮಳಿಗೆ ಬಿಟ್ಟು ಕೊಡಬೇಕಿತ್ತು. ಆದರೆ ಮಳಿಗೆ ಬಿಡದೇ ಕಾನೂನು ಉಲ್ಲಂಘಿಸಿರುವ ಆ ಇಬ್ಬರ ಸದಸ್ಯತ್ವ ರದ್ದುಪಡಿಸಬೇಕು. ಅರ್ಹ ಫಲಾನುಭವಿಗಳಿಗೆ ಅಂಗಡಿ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

ಬಡವರಿಗೆ ಹಂಚಬೇಕಿದ್ದ ಮಳಿಗೆ ಶ್ರೀಮಂತರಿಗೆ ವಿತರಣೆ : ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಮಾತನಾಡಿ, ಒಂದು ಕೋಟಿ ರೂ. ಕಾರು ಇದ್ದವರು, ಚಿನ್ನಾಭರಣ ಅಂಗಡಿ ಇದ್ದವರಿಗೆ ಮಳಿಗೆ ಹಂಚಿಕೆಯಾಗಿದೆ. ಬಡವರಿಗೆ ಮಳಿಗೆ ನೀಡಬೇಕಿತ್ತು. ಬಿಜೆಪಿ ಬೆಂಬಲಿಗರು, ಕಾರ್ಯಕರ್ತರಿಗೆ ಹಂಚಿಕೆ ಮಾಡಿದ್ದಕ್ಕೆ ದಾಖಲೆ ಇದೆ. ಜನಪ್ರತಿನಿಧಿಗಳ ಹೆಸರಿನಲ್ಲಿ ಸರ್ಕಾರಿ ಆಸ್ತಿ ಇರಬಾರದು ಎಂದು ಕಾನೂನಿನಲ್ಲಿ ಇದೆ. ಪಾಲಿಕೆ ಸದಸ್ಯರು ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ದಾರೆ. ಈ ಸಂಬಂಧ ಪ್ರಾದೇಶಿಕ ಆಯುಕ್ತರು ಕ್ರಮ ಕೈಗೊಳ್ಳಬೇಕಿದೆ. ತನಿಖಾ ವರದಿ ಬರಬೇಕಿದೆ, ನೋಡೋಣ ಎಂದಿದ್ದಾರೆ.

ಇದನ್ನೂಓದಿ:ಚಿತ್ರದುರ್ಗ: ಇನ್ನೋವಾ ಕಾರಿನಲ್ಲಿ ₹8 ಕೋಟಿ ಪತ್ತೆ; ದಾಖಲೆ ಇಲ್ಲದ ಹಣ ಪೊಲೀಸ್ ವಶಕ್ಕೆ

Last Updated : Nov 30, 2023, 3:01 PM IST

ABOUT THE AUTHOR

...view details