ಬೆಳಗಾವಿ:ಕಳೆದ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಹಣ್ಣು ಮಾರುತ್ತಿದ್ದ ಮಹಿಳೆ ಮೇಲೆ ಏಕಾಏಕಿ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿದ್ದ ಅಪರಿಚಿತ ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಅಣ್ಣಪ್ಪ ಸೇಠ್ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ ಆರೋಪಿ, ಯಾಸ್ಮೀನ್ ತಹಶೀಲ್ದಾರ್(36) ಆ್ಯಸಿಡ್ ದಾಳಿಗೊಳಗಾದ ಮಹಿಳೆ. ಈಕೆ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಬೀದಿ ಬದಿಯಲ್ಲಿ ಬಾಳೆ ಹಣ್ಣು ಮಾರುತ್ತ ಕುಳಿತಿದ್ದಳು, ಏಕಾಏಕಿ ಈಕೆಯ ಬಳಿ ಬಂದ ಅಣ್ಣಪ್ಪ ಸೇಠ್ ಆ್ಯಸಿಡ್ ದಾಳಿ ಮಾಡಿ ಎಸ್ಕೇಪ್ ಆಗಿದ್ದ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಯಾಸ್ಮೀನ್ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಇನ್ನು ಆ್ಯಸಿಡ್ ದಾಳಿ ಮಾಡಿದ ಅಣ್ಣಪ್ಪ ಕೂಡ ಮನೆಗೆ ಹೋಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ ಆರೋಪಿ ಅಣ್ಣಪ್ಪ ಸೇಠ್ ಆ್ಯಸಿಡ್ ದಾಳಿ ಮಾಡಿದ್ದಾದರೂ ಏಕೆ.?
ಯಾಸ್ಮೀನ್ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಜ್ಯುವೆಲ್ಲರಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ ಸೇಠ್ ಜೊತೆಗೆ ಕಳೆದ 10 ವರ್ಷಗಳಿಂದ ಲವ್ವಿಡವ್ವಿ ನಡೆಸಿದ್ದಳು. ಆದರೆ ಕಳೆದೊಂದು ತಿಂಗಳಿಂದ ಅಣ್ಣಪ್ಪನನ್ನು ಬಿಟ್ಟು ಬೇರೊಬ್ಬನೊಂದಿಗೆ ಓಡಾಡುತ್ತಿದ್ದಳು. ಈ ವಿಚಾರ ಅಣ್ಣಪ್ಪನಿಗೆ ತಿಳಿದು ಇಬ್ಬರ ನಡುವೆ ವಾಗ್ವಾದ ಕೂಡ ಆಗಿದೆ. ಇದರಿಂದ ಕೆರಳಿದ ಅಣ್ಣಪ್ಪ ಯಾಸ್ಮೀನ್ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾಗಿ ಹೇಳಿದ್ದಾನೆ.
ಇದನ್ನೂ ಓದಿ.. ರಾಯಬಾಗ: ಹಣ್ಣು ಮಾರುತ್ತಿದ್ದ ಮಹಿಳೆ ಮೇಲೆ ಅಪರಿಚಿತನಿಂದ ಆ್ಯಸಿಡ್ ದಾಳಿ
ಆ್ಯಸಿಡ್ ದಾಳಿ ಮಾಡಿ ಅಣ್ಣಪ್ಪ ಸ್ಥಳದಿಂದ ಎಸ್ಕೇಪ್ ಆಗಿದ್ದ. ಇತ್ತ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ದಾಳಿ ಬಳಿಕ ಅಣ್ಣಪ್ಪ ಮನೆಗೆ ಹೋಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ಕೂಡಲೇ ಅಣ್ಣಪ್ಪನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.