ಚಿಕ್ಕೋಡಿ :ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕಳೆದ 15 ವರ್ಷಗಳಿಂದ ಈ ಭಾಗದ ಜನತೆ ರುದ್ರಭೂಮಿ ಇಲ್ಲದೆ ಮೃತದೇಹಗಳನ್ನು ರಸ್ತೆ ಬದಿಯಲ್ಲಿ ಅಂತ್ಯಕ್ರಿಯೆ ಮಾಡುವ ಪರಿಸ್ಥಿತಿ ಎದುರಾಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ರುದ್ರಭೂಮಿಯಿಲ್ಲದೆ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ರುದ್ರಭೂಮಿಗೆ ಸರ್ಕಾರಿ ಜಾಗ ಮಂಜೂರಾದರೂ, ಇಲ್ಲಿಯವರೆಗೆ ಜಮೀನು ಸಿಕ್ಕಿಲ್ಲ. ಸರ್ಕಾರದಿಂದ 6 ಗುಂಟೆ ಜಾಗ ಮಂಜೂರಾದರೂ ಇನ್ನೂ ರಸ್ತೆ ಪಕ್ಕದಲ್ಲೇ ಅಂತ್ಯಕ್ರಿಯೆ ಮಾಡುವ ಪರಿಸ್ಥಿತಿ ಬಂದಿದೆ.
ಹಾರುಗೇರಿಯಲ್ಲಿರುವ ಸರ್ಕಾರಿ ರುದ್ರಭೂಮಿ ಜಮೀನು ಸರ್ವೆ ನಂ 589+1+2/3ಯ 6 ಗುಂಟೆ ಸರ್ಕಾರಿ ಜಾಗ ಹಿಂದೂಗಳ ರುದ್ರಭೂಮಿ ಎಂದು ಸರ್ಕಾರದ ಆದೇಶವಿದ್ದರೂ, ಸ್ಥಳೀಯ ರಾಜಕಾರಣದಿಂದ ಬೇರೆಯವರ ಹಿಡಿತದಲ್ಲಿ ರುದ್ರಭೂಮಿ ಜಮೀನು ಇದೆ. ಸ್ಥಳೀಯ ನಾಯಕರು, ರೈತರು ಈ ಜಮೀನನ್ನು ಅಕ್ರಮವಾಗಿ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.
ಈ ರುದ್ರಭೂಮಿಗೆ 15 ಲಕ್ಷದ ಕಾಮಗಾರಿ ಮಂಜೂರಾದರೂ ರುದ್ರಭೂಮಿಗೆ ಜಮೀನು ದೊರಕಿಲ್ಲ. ಬ್ರಾಹ್ಮಣ, ಕ್ಷತ್ರಿಯರು, ವಿಶ್ವಕರ್ಮ, ಮರಾಠಾ ಸೇರಿದಂತೆ ಇತರೆ ಹಿಂದೂ ಜನರು ರುದ್ರ ಭೂಮಿಯ ಸಲುವಾಗಿ ಪರದಾಡುತ್ತಿದ್ದು, ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದರೂ ದಿವ್ಯ ನಿರ್ಲಕ್ಷ್ಯ ತೋರಿತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಹಲವು ಬಾರಿ ಶಾಸಕರು, ಸಚಿವರು, ಲೋಕಸಭಾ ಸದಸ್ಯ, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಅವರು ಕ್ಯಾರೇ ಎನ್ನುತ್ತಿಲ್ಲ. ಮುಂದಿನ ದಿನಗಳಲ್ಲಿ ರುದ್ರ ಭೂಮಿ ಕೊಡದೆ ಹೋದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೆಣ ಸುಡಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಅಂತ್ಯಸಂಸ್ಕಾರ ಮಾಡಲು ಜಮೀನು ಇಲ್ಲದೆ ರಸ್ತೆ ಬದಿಯಿರುವ ಸ್ವಲ್ಪ ಜಾಗದಲ್ಲಿ ಅಂತ್ಯಕ್ರಿಯೆ ಮಾಡುವ ಅನಿವಾರ್ಯತೆ ಬಂದಿದೆ. ಭಜರಂಗದಳ ಕಾರ್ಯಕರ್ತರು ಹಾಗೂ ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಅತಿಕ್ರಮಣವಾದ ರುದ್ರಭೂಮಿಯನ್ನು ಸರಿಪಡಿಸಿಕೊಡಿ, ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.