ಬೆಳಗಾವಿ: ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಎಂಇಎಸ್ ಮಧ್ಯೆ ಫೈಟ್ ನಡೆಯುತ್ತಿದೆ ಎಂದು ಶಿವಸೇನೆ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳ ಬಳಿಕ ಎಂಇಎಸ್, ಶಿವಸೇನೆ, ಶ್ರೀರಾಮಸೇನೆ ಎಲ್ಲರೂ ಒಂದಾಗಿದ್ದಾರೆ. ಕಳೆದ 65 ವರ್ಷಗಳಿಂದ ಬೆಳಗಾವಿಯಲ್ಲಿ ಮರಾಠಿಗರು ಅನ್ಯಾಯದ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ನಮಗೆ ಅನ್ಯಾಯ ಮಾಡುತ್ತಿದೆ ಎಂದರು.
ಬಿಜೆಪಿ ಇಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡುತ್ತಿದ್ರೂ ಹೆದರುವ ಮಾತಿಲ್ಲ. ಮಹಾರಾಷ್ಟ್ರದ ಯಾವುದೇ ನಾಯಕರು ಇಲ್ಲಿಗೆ ಬಂದು ಎಂಇಎಸ್ ವಿರುದ್ಧ ಪ್ರಚಾರ ಮಾಡಬಾರದು. ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಜನರು ಎಂಇಎಸ್ ಕೈ ಹಿಡಿದಿದ್ದಾರೆ. ಈ ಚುನಾವಣೆಯಲ್ಲಿ ಪ್ರಮುಖ ಹೋರಾಟ ಮರಾಠಿಗರಿಗಾಗಿ, ಮಾತೃ ಭಾಷೆಗಾಗಿ ಎಂದರು.
ಶಿವಸೇನೆ ವಕ್ತಾರ ಸಂಜಯ್ ರಾವುತ್ ಮಹಾರಾಷ್ಟ್ರದಲ್ಲಿ ಎಲ್ಲಾ ಭಾಷೆಯವರಿದ್ದಾರೆ. ನಾವು ಅವರ ಶಾಲೆಯನ್ನು ಬಂದ್ ಮಾಡಿಲ್ಲ. ಆದ್ರೇ ಕರ್ನಾಟಕದಲ್ಲಿ ಮರಾಠಿ ಶಾಲೆ ಬಂದ್ ಮಾಡಲಾಗುತ್ತಿದೆ. ಗಡಿ ವಿಚಾರದಲ್ಲಿ ನಮ್ಮ ಜಗಳ ಇರುವುದು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧವೇ ಹೊರತು ನಮ್ಮ ಜನರ ವಿರುದ್ಧವಲ್ಲ. ಮಹಾರಾಷ್ಟ್ರದಲ್ಲಿ ಕನ್ನಡಿಗರಿದ್ದಾರೆ, ಅವರ ಜತೆಗೆ ನಾವು ಜಗಳ ಆಡಿಲ್ಲ ಎಂದರು.
ಇದನ್ನೂ ಓದಿ:ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕೆ ಹೆಚ್ಚುತ್ತಿವೆ ಟೆಸ್ಟಿಂಗ್ ಸೆಂಟರ್ಸ್!
ಬೆಳಗಾವಿ ಪರಿಸ್ಥಿತಿ ನೋಡಿದ್ರೆ ಬಿಜೆಪಿ ಮತ್ತು ಎಂಇಎಸ್ ನಡುವೆ ಪೈಪೋಟಿ ಕಂಡು ಬರುತ್ತಿದೆ. ಪದೇ ಪದೆ ಕನ್ನಡಿಗರು - ಮರಾಠಿಗರ ಗಲಾಟೆ ನಡೆಯಬಾರದು. ಇದಕ್ಕೆ ಎರಡು ರಾಜ್ಯದ ಸರ್ಕಾರ ಕ್ರಮ ಕೈಗೊಳ್ಳಬೇಕು. ಕರ್ನಾಟಕದಲ್ಲಿ ಲಾಕ್ಡೌನ್ ವಿಚಾರದಲ್ಲಿ ಯಡಿಯೂರಪ್ಪ ಅವರಿಗೆ ಸಂಪೂರ್ಣ ಸ್ವಾತಂತ್ರ ಇದೆ. ಪ್ರತಿಯೊಂದು ರಾಜ್ಯದಲ್ಲಿ ಲಾಕ್ ಡೌನ್ ಮಾಡಬೇಕು. ಆಗಲೇ ಇಡೀ ದೇಶ ಸುರಕ್ಷಿತವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕೂಡ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.